ಅಂಕೋಲಾ: ಅಂಕೋಲಾ ತಹಸಿಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವೆ ಇದೀಗ ಪುನಃ ಪ್ರಾರಂಭಗೊಂಡಿದೆ. ಈ ಹಿಂದಿನ ದಿನಗಳಲ್ಲಿ ಕಚೇರಿಯಲ್ಲಿನ ಆಧಾರ್ ಸೇವೆ ಸ್ಥಗಿತಗೊಂಡಿದ್ದರಿಂದ ಶಾಲಾ ಮಕ್ಕಳು ದೂರದ ಬೆಲೇಕೆರಿ ಹೋಬಳಿ ನಾಡಕಚೇರಿಗೆ ತೆರಳಬೇಕಾಗಿತ್ತು. 18 ವರ್ಷ ಮೇಲ್ಪಟ್ಟವರು ಕಾರವಾರಕ್ಕೆ ಹೋಗಬೇಕಾದ ಅನಿವಾರ್ಯತೆಯೂ ಇತ್ತು.ಈ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಪೋಷಕರಿಂದ ಅಂಕೋಲಾ ತಹಸಿಲ್ದಾರ್ ಅವರಿಗೆ ಸಾಲುಸಾಲು ಮನವಿಗಳು ಸಲ್ಲಿಕೆಯಾಗಿದ್ದವು.

ಈ ಹಿನ್ನೆಲೆಯಲ್ಲಿ ತಹಸಿಲ್ದಾರ್ ಡಾ :ಚಿಕಪ್ಪ ನಾಯಕ್ ಅವರು ವಿಶೇಷ ಮುತುವರ್ಜಿವಹಿಸಿ ಆಧಾರ್ ಕಾರ್ಡ್ ಸೆಂಟರನ್ನು ಮತ್ತೆ ಅಂಕೋಲಾದಲ್ಲೇ ಆರಂಭಿಸಲು ಕ್ರಮ ಕೈಗೊಂಡಿದ್ದು, ಯಶಸ್ವಿಯಾಗಿದೆ. ನಿನ್ನೆ ದಿನಾಂಕ 20/12/2026 ರಂದು ಆಧಾರ್ ಕಾರ್ಡ್ ಸೇವೆ ಅಧಿಕೃತವಾಗಿ ಪ್ರಾರಂಭಗೊಂಡಿದ್ದು, ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಅಂಕೋಲಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರಿಗೆ ಮಹತ್ತರ ಅನುಕೂಲವಾಗಲಿದೆ. ಸ್ಥಳೀಯರು ತಹಸಿಲ್ದಾರ್ ಅವರ ಕ್ರಮವನ್ನು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ಸೇವೆ ನಿರಂತರವಾಗಿ ಲಭ್ಯವಾಗಲಿ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ..
ವಿಕಾಸ ವಾಹಿನಿ ವರದಿ

