ಅಂಕೋಲಾದ ಕೇಣಿ ಬಂದರು ವಿರೋಧಿಸಿ ಆರನೇ ದಿನದ ಹೋರಾಟ:ಜನರ ನೋವನ್ನು ಆಲಿಸದ ಸಚಿವರು–ಶಾಸಕರು–ಸಂಸದರ ವಿರುದ್ಧ ಹೋರಾಟಗಾರರಿಂದ ಧಿಕ್ಕಾರ ಘೋಷಣೆ..

News Desk
2 Min Read

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ “ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಒಂದು ವರ್ಷದಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದ ಮುಂದುವರಿದ ಭಾಗವಾಗಿ ನವೆಂಬರ್ 12ರಿಂದ 25ರವರೆಗೆ ಅನಿರ್ಧಿಷ್ಟಾವಧಿ ಧರಣಿ–ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿ, ಈ ಧರಣಿಯು ಪ್ರಾರಂಭವಾಗಿ ಆರನೇ ದಿನದಲ್ಲಿಯೂ ಕೂಡ ಹೋರಾಟಗಾರರ ಕೋಪ ಕಡಿಮೆಯಾಗದೇ ಹೆಚ್ಚುತ್ತಿದೆ.

ಹೋರಾಟಗಾರ ಸಮಿತಿಯ ಪ್ರಮುಖ ಮುಖಂಡ ಸಂಜೀವ ಬಲೆಗಾರ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿ : “ಈವರೆಗೆ ಉತ್ತರ ಕನ್ನಡದ ಒಬ್ಬನೇ ಒಬ್ಬ ಜನಪ್ರತಿನಿಧಿಯೂ ಧರಣಿ ಸ್ಥಳಕ್ಕೆ ಬಂದು ಕೇಣಿ ವಾಣಿಜ್ಯ ಬಂದರು ಯೋಜನೆ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ಸ್ಪಷ್ಟವಾಗಿ ಜನಪ್ರತಿನಿಧಿಗಳು ಜನರ ಪರವಲ್ಲ, ಕಂಪನಿಯ ಪರವಾಗಿ ನಿಂತಿದ್ದಾರೆ ಎಂಬುದನ್ನು ತೋರ್ಪಡಿಸುತ್ತದೆ. ರೈತರು ಬೆಳೆದ ಬೆಳೆಗಳನ್ನು ಬಂಜರು ಭೂಮಿ ಎಂದು ಸುಳ್ಳಾಗಿ ವರದಿ ಮಾಡಲಾಗಿದೆ, ಸತ್ಯಾಂಶ ಎಲ್ಲವೂ ಸುಮ್ಮನೆ ಮರೆಮಾಡಲಾಗಿದೆ. ಮೀನುಗಾರರು ಬದುಕುತ್ತಿರುವ ಸಿ.ಆರ್.ಜೆಡ್ ಪ್ರದೇಶದಲ್ಲಿ ‘ಮೀನುಗಾರರು ಬದುಕುತ್ತಿಲ್ಲ’ ಎಂಬ ಸುಳ್ಳು ವರದಿಗಳ ಆಧಾರದ ಮೇಲೆ ಯೋಜನೆ ತಯಾರಿಸಲಾಗಿದೆ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಬಡ ರೈತರು–ಮೀನುಗಾರರು–ಕೂಲಿಕಾರರ ನಿಜವಾದ ನೆಲೆಗಳನ್ನು ಕಳೆದುಕೊಳ್ಳುವಂತೆಯೇ ಜನಪ್ರತಿನಿಧಿಗಳು ಸಹಕರಿಸುತ್ತಿದ್ದಾರೆ.”

ಅವರು ಮುಂದುವರಿಸಿ ಹೇಳಿದರು: “ಒಂದು ವರ್ಷದಿಂದ ನಾವು ಊಟ–ಬಟ್ಟೆ–ನಿದ್ದೆ ಮರೆತು ಹೋರಾಟ ಮಾಡುತ್ತಿದ್ದೇವೆ. JSW ಕಂಪನಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಪದೇ ಪದೇ ಮನವಿಗಳನ್ನು ಕೊಟ್ಟಿದ್ದೇವೆ. ಹಲವು ಪ್ರತಿಭಟನೆ, ಮೆರವಣಿಗೆ, ಆಂದೋಲನಗಳನ್ನು ಮಾಡಿದರೂ ಸರ್ಕಾರವೂ, ಜನಪ್ರತಿನಿಧಿಗಳೂ ಕಿವುಡಾಗಿದ್ದಾರೆ. ನಮ್ಮ ಕೂಗಿಗೆ ಯಾರು ಕಿವಿಗೊಡ್ತಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಇನ್ನೂ ಉಗ್ರ ರೂಪ ತಾಳಲಿದೆ.”ಎಂದರು.

ಹೋರಾಟಗಾರ್ತಿ ಸಂಗೀತ ಕಲ್ಮಠ ರವರು ರಸ್ತೆ ಬದಿಯಲ್ಲಿ ಎರಡು ಕಲ್ಲುಗಳನ್ನು ಇಟ್ಟು ಪಾತ್ರೆಯಲ್ಲಿ ರಾಗಿ ಅಂಬಲಿ ತಯಾರಿಸಿ ಹೋರಾಟಗಾರರಿಗೆ ನೀಡಿದರು. ವಿಕಾಸವಾಹಿನಿಯೊಂದಿಗೆ ಮಾತನಾಡಿದ ಅವರು “ಈ ಸರ್ಕಾರವನ್ನು ನಂಬಿ ಇವತ್ತು ನಾವು ಬೀದಿಗೆ ಬಂದು ಕುಳಿತಿದ್ದೇವೆ. ರೈತರೆ ದೇಶದ ಬೆನ್ನೆಲುಬು ಎಂದು ಹೇಳುವವರೇ ಈಗ ರೈತರ ಬೆನ್ನನ್ನು ಮುರಿಯುತ್ತಿದ್ದಾರೆ. ನಾವು ಎಷ್ಟು ಗಂಟಲು ಹರಿದು ಕೂಗಿದರೂ ನಮ್ಮ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಯಾರಿಗೂ ನಮ್ಮ ನೋವು ಕೇಳಿಸುತ್ತಿಲ್ಲ.” ಎಂದರು. ಅವರು ಅಲ್ಲಿ ತಕ್ಷಣವೇ ಒಂದು ಹಾಡು ರಚಿಸಿ ಹಾಡುತ್ತ — ಕಾಣದಂತೆ ಮಾಯವಾದರು “ನಮ್ಮ ಉಸ್ತುವಾರಿ ಸಚಿವರು ಕಾಣದಂತೆ ಕಂಪನಿಯವರ ಜೊತೆ ಓಡಿ ಹೋದರು…” ಎಂದು ಹಾಡು ಹೇಳುತ್ತಾ. ತಮ್ಮ ಹಾಡಿನಲ್ಲಿ ಶಾಸಕರು–ಸಚಿವರು–ಸಂಸದರನ್ನು ಒಟ್ಟಾರೆ ಸೇರಿಸಿಕೊಂಡು ತಮ್ಮ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಹೋರಾಟ ನಿರತರು ಕೇಣಿ ಬಂದರು ವಿರೋಧಿಸಿ ಮಾತನಾಡುತ್ತಾ.ಜೆ ಎಸ್ ಡಬ್ಲ್ಯೂ ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು.

ಧರಣಿಯ ಆರನೇ ದಿನ ಬೋಗ್ರಿಬೈಲ ಮತ್ತು ನಿಂಗ್ಲಿ ಭಾಗದ ಸಾರ್ವಜನಿಕರು ಸೇರಿ ಸರ್ಕಾರದ ಅಧಿಕಾರಿಗಳು, ಶಾಸಕರು, ಉಸ್ತುವಾರಿ ಸಚಿವರು, ಉತ್ತರ ಕನ್ನಡ ಕ್ಷೇತ್ರದ ಸಂಸದರಿಗೆ ಧಿಕ್ಕಾರ ಕೂಗಿದರು. “ಜನರಿಗೆ ಬೇಡವಾದ ಯೋಜನೆ ಸರ್ಕಾರಕ್ಕೆ ಯಾಕೆ ಬೇಕು?” ಎಂಬ ಪ್ರಶ್ನೆ ಸ್ಥಳದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಇದೀಗ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿರುವ ದೊಡ್ಡ ಪ್ರಶ್ನೆ — ಮುಂದಿನ ದಿನಗಳಲ್ಲಿ ಉತ್ತರ ಕನ್ನಡದ ಸಚಿವರು, ಶಾಸಕರು, ಸಂಸದರು ಧರಣಿ ಸ್ಥಳಕ್ಕೆ ಬಂದು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಕೈಜೋಡಿಸುವರೇ? ಅಥವಾ ಜನರ ನೋವಿಗೆ ಮತ್ತೆ ಕಿವಿಗೊಡದೇ ಮೌನವಾಗಿಯೇ ಇರುವರೇ? ಎಂದು ಕಾದು ನೋಡಬೇಕಾಗಿದೆ.

Share This Article