ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿಯ ಶೀಘ್ರ ಬಂಧನಕ್ಕೆ ಕರವೇ ಆಗ್ರಹ..

News Desk
1 Min Read

ಕಾರವಾರ: ತಾಲೂಕಿನ ಮಾಜಾಳಿಯಲ್ಲಿ ಹತ್ತು ವರ್ಷದ ಮುಗ್ಧ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ತಾಲೂಕು ಅಧ್ಯಕ್ಷ ನರೇಂದ್ರ ತಳೇಕರ ಹಾಗೂ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಆಗ್ರಹಿಸಿದ್ದಾರೆ.

ಮಾಜಾಳಿಯಲ್ಲಿ ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಸಂಶಾದ್ ಎಂಬಾತ ಬಾಲಕಿಯ ಮೇಲೆ ಈ ಹೀನ ಕೃತ್ಯ ಎಸಗಿದ್ದಾನೆ ಎಂಬ ಆರೋಪ ವ್ಯಕ್ತವಾಗಿದ್ದು, ಈ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಕೆಲಸ ಅರಸಿ ಬೇರೆ ರಾಜ್ಯಗಳಿಂದ ಬಂದು ಸ್ಥಳೀಯವಾಗಿ ಉದ್ಯೋಗ ಮಾಡಿಕೊಂಡಿರುವ ಕೆಲವರು ದಬ್ಬಾಳಿಕೆ, ಶೋಷಣೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಂತಹ ಅಕ್ಷಮ್ಯ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮುಗ್ಧ ಮಕ್ಕಳ ಸುರಕ್ಷತೆಗೆ ಧಕ್ಕೆ ತರುವ ಇಂತಹ ದುಷ್ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಸ್ಥಳದಿಂದ ಪರಾರಿಯಾಗಿರುವುದು ಗಂಭೀರ ವಿಚಾರವಾಗಿದ್ದು, ಪೊಲೀಸರು ಯಾವುದೇ ವಿಳಂಬ ಮಾಡದೆ ಆತ ಎಲ್ಲಿಯೇ ಅಡಗಿದ್ದರೂ ಪತ್ತೆಹಚ್ಚಿ ಬಂಧಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಹೀನ ಮನಸ್ಥಿತಿಯವರಿಗೆ ಸಮಾಜದಲ್ಲಿ ಯಾವುದೇ ರೀತಿಯ ಕ್ಷಮೆ ಅಥವಾ ರಕ್ಷಣೆ ಇರಬಾರದು ಹಾಗೂ ಕಾನೂನಿನ ಭಯ ಹುಟ್ಟಿಸುವ ರೀತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನರೇಂದ್ರ ತಳೇಕರ ಮತ್ತು ರಾಜಾ ನಾಯ್ಕ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

Share This Article