ಅಂಕೋಲಾ: (ಅಗಸ್ಟ 13). ಅಂಕೋಲಾ ಪುರಸಭೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸಾಮಾನ್ಯ ಸಭೆ ನಡೆಯದೇ ಇರುವುದರಿಂದ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡಿವೆ. ಸದಸ್ಯರು ಅಸಮಾಧಾನದಿಂದ ಸಭೆಗೆ ಹಾಜರಾಗದೆ ಇರುವುದೇ ಪ್ರಮುಖ ಕಾರಣ. ಇದರ ಪರಿಣಾಮವಾಗಿ ಕುಡಿಯುವ ನೀರು, ರಸ್ತೆ ದುರಸ್ತಿ, ಕಸದ ವಿಲೇವಾರಿ, ಬಡಾವಣಾ ಅಭಿವೃದ್ಧಿ ಸೇರಿದಂತೆ ಅನೇಕ ಮೂಲಭೂತ ಕಾರ್ಯಗಳು ಸ್ಥಗಿತಗೊಂಡಿವೆ.
ಪುರಸಭೆಯ ಮುಖ್ಯಾಧಿಕಾರಿ ಅಕ್ಷತಾ ಎಚ್ ಅವರು ತಮ್ಮ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಸಭೆ ನಡೆಯದೇ ಇರುವುದರಿಂದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ತಪ್ಪಲ್ಲದೆ ಸದಸ್ಯರ ಗೈರುಹಾಜರಿಯೇ ಈ ಸ್ಥಿತಿಗೆ ಕಾರಣವಾಗಿರುವುದನ್ನು ಸ್ಥಳೀಯರು ಉಲ್ಲೇಖಿಸುತ್ತಿದ್ದಾರೆ.

ಈ ನಡುವೆ, ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರರಾದ “ಚೇತನ ನಾಯಕರು” ವಿಕಾಸ ವಾಹಿನಿಗೆ ನೀಡಿದ ಮಾಧ್ಯಮ ಪ್ರಕಟಣೆಯಲ್ಲಿ ಹೀಗೆ ತಿಳಿಸಿದ್ದಾರೆ:
“ಅಂಕೋಲಾ ಪುರಸಭೆಯಲ್ಲಿ ಸಾರ್ವಜನಿಕ ಕೆಲಸಗಳಾಗುತ್ತಿಲ್ಲ. ಏಕೆಂದರೆ ಅಲ್ಲಿಯೂ ಸದಸ್ಯರು ಹಾಗೂ ಮುಖ್ಯ ಅಧಿಕಾರಿಗಳ ಸಮಸ್ಯೆಯಿಂದ ಅಲ್ಲಿ ನಡೆಯಬೇಕಾದ ಸಾಮಾನ್ಯ ಸಭೆ ನಡೆಯದೆ ಸಾರ್ವಜನಿಕರ ಕೆಲಸಗಳಾಗುತ್ತಿಲ್ಲ.
ಆದ್ದರಿಂದ ಇವೆರಡರ ನಡುವೆ ನಡೆಯುತ್ತಿರುವ ಪ್ರತಿಷ್ಠೆಯಿಂದ ಹಾಗೂ ರಾಜಕೀಯ ಸಮಸ್ಯೆಗಳಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದರು ಕೂಡ ಮೇಲಾಧಿಕಾರಿಗಳ ಗಮನಕ್ಕೆ ಇದ್ದರೂ ಸುಮ್ಮನೆ ಕುಳಿತಿ ರುವುದು ಕಾನೂನು ವಿರುದ್ಧವಾಗಿರುತ್ತದೆ.
ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಅಂಕೋಲಾ ಪುರಸಭೆಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿ ಪುರಸಭೆಯ ಕಾರ್ಯಕಲಾಪಗಳನ್ನು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಸುಗಮವಾಗಿ ನಡೆಸುವಂತೆ ಮಾಡಬೇಕಾಗಿ ತಮ್ಮಲ್ಲಿ ಅಂಕೋಲಾ ಪುರಸಭೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಸದಸ್ಯರು ಸಮಸ್ಯೆಗಳು ಇದ್ದಲ್ಲಿ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲಿ. ಅಲ್ಲಿವರೆಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಆಡಳಿತಾಧಿಕಾರಿಗಳ ನೇಮಕ ಮಾಡುವಂತೆ ವಿನಂತಿ.”
ಚೇತನ ನಾಯಕರ ಅಭಿಪ್ರಾಯದಿಂದ, ಪುರಸಭೆಯ ಸ್ಥಗಿತಕ್ಕೆ ಪರಿಹಾರ ಕಂಡುಹಿಡಿಯಲು ಜಿಲ್ಲಾಡಳಿತದ ತ್ವರಿತ ಮಧ್ಯಪ್ರವೇಶಕ್ಕೆ ಸಾರ್ವಜನಿಕ ನಿರೀಕ್ಷೆ ಹೆಚ್ಚಾಗಿದೆ.
……….

