ಉತ್ತರ ಕನ್ನಡದಲ್ಲಿ ಬಿಸಿಲಿನ ತಾಪ ಏರಿಕೆಗೆ ಮುಂದಿನ 2 ದಿನ ಎಚ್ಚರಿಕೆ ವಹಿಸಲು ಸೂಚನೆ..

News Desk
1 Min Read

ಉತ್ತರ ಕನ್ನಡ : ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ (ಫೆ. 14 ಮತ್ತು 15) ಬಿಸಿಲಿನ ತಾಪಮಾನ ವಾಡಿಕೆಗಿಂತ ಹೆಚ್ಚಾಗಲಿದ್ದು, ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಹೊರಡಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ, ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶವು 37.8 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುವ ಸಾಧ್ಯತೆಯಿದೆ. ಪ್ರಸ್ತುತ ಇರುವ ಉಷ್ಣತೆಗಿಂತ ಸುಮಾರು 3 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಜಿಲ್ಲಾಡಳಿತದ ಸಲಹೆಗಳು: ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಈ ಕೆಳಗಿನ ಕ್ರಮಗಳನ್ನು ಪಾಲಿಸಲು ಕೋರಲಾಗಿದೆ

ದ್ರವಹಾರ ಸೇವನೆ: ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ, ನಿಂಬೆ ಪಾನಕ ಮತ್ತು ಒಆರ್‌ಎಸ್ (ORS) ದ್ರಾವಣವನ್ನು ಹೆಚ್ಚಾಗಿ ಸೇವಿಸಿ.

ವಸ್ತ್ರ ಸಂಹಿತೆ: ತಿಳಿ ಬಣ್ಣದ, ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿಗೆ ಹೋಗುವಾಗ ತಲೆಗೆ ಟೋಪಿ, ಛತ್ರಿ ಅಥವಾ ಬಟ್ಟೆಯನ್ನು ಬಳಸಿಕೊಳ್ಳಿ.

ಸಮಯದ ಎಚ್ಚರಿಕೆ: ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ, ಈ ಸಮಯದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದನ್ನು ತಡೆಯಿರಿ.

ವಿಶೇಷ ಗಮನ: ವಯಸ್ಸಾದವರು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಏನು ಮಾಡಬಾರದು?

ಬಿಸಿಲಿನಲ್ಲಿ ಕಠಿಣ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಡಿ. ಮದ್ಯಪಾನ, ಟೀ-ಕಾಫಿ ಮತ್ತು ಕೃತಕ ಶೀತಲ ಪಾನೀಯಗಳನ್ನು ತ್ಯಜಿಸಿ (ಇವು ದೇಹದ ನೀರಿನಂಶವನ್ನು ಕಡಿಮೆ ಮಾಡುತ್ತವೆ). ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಪ್ರಾಣಿಗಳನ್ನು ಕೂಡಿ ಹಾಕಿ ಹೋಗಬಾರದು.

ತುರ್ತು ಸಂಪರ್ಕ: ಬಿಸಿಲಿನಿಂದ ಬಳಲಿಕೆ, ತಲೆಸುತ್ತು ಅಥವಾ ಅಸ್ವಸ್ಥತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಜಿಲ್ಲಾಡಳಿತದ 24×7 ಕಂಟ್ರೋಲ್ ರೂಮ್ ಸಂಖ್ಯೆ 1077 ಅಥವಾ ವಾಟ್ಸಾಪ್ ಸಂಖ್ಯೆ 94835 11015 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Share This Article