ಅಂಕೋಲಾ (ಮಾ. 11): ಸಾಮಾನ್ಯ ಜನರು ದಿನನಿತ್ಯ ಬಳಸುವ ಅಡುಗೆ ಅನಿಲದ (ಎಲ್ಪಿಜಿ) ದರವನ್ನು ದಿಢೀರ್ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಅಂಕೋಲಾದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಾಗೂ ಅಂಕೋಲಾ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಸ್ತೆಗಿಳಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂದು ಅಂಕೋಲಾ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ ಕಾರ್ಯಕರ್ತರು, ಕೇಂದ್ರ ಸರ್ಕಾರದ ನಡೆಯ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾಕಾರರ ಪ್ರಮುಖ ಆರೋಪಗಳೇನು?
“ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಗ್ಯಾಸ್ ದರ ಹೆಚ್ಚಳ ಮಾಡಿರುವುದು ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಏರಿಸಲಾದ ದರವನ್ನು ಹಿಂಪಡೆಯಬೇಕು” ಎಂದು ಮುಖಂಡರು ಸರ್ಕಾರವನ್ನು ಆಗ್ರಹಿಸಿದರು. ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ಹಳ್ಳಿ-ಹಳ್ಳಿಗಳಿಗೂ ವಿಸ್ತರಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಕೇಂದ್ರದ ವಿರುದ್ಧದ ಈ ಹೋರಾಟದಲ್ಲಿ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ಒಟ್ಟಾಗಿ ಕಾಣಿಸಿಕೊಂಡರು. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಾಯಿನಾಥ ಗಾಂವಕರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾರದಾ ರಾಥೋಡ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಜಾತ ಗಾಂವಕರ, ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ, ಗ್ಯಾರಂಟಿ ಪ್ರಾಧಿಕಾರದ ಅಂಕೋಲಾ ತಾಲೂಕು ಅಧ್ಯಕ್ಷ ಪಾಂಡುರಂಗ ಗೌಡ ಉಪಸ್ಥಿತರಿದ್ದರು. ಇವರೊಂದಿಗೆ ಅಂಕೋಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ ಖಾರ್ವಿ, ಸಾಮಾಜಿಕ ಜಾಲತಾಣ ವಿಭಾಗದ ಸುರೇಶ್ ನಾಯ್ಕ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪ್ರಮುಖರು ಹಾಗೂ ಕಾರ್ಯಕರ್ತರು ಈ ಪ್ರತಿಭಟನೆಗೆ ಸಾಥ್ ನೀಡಿದರು.
ವಿಕಾಸ ವಾಹಿನಿ ವರದಿ

