ಕಾರವಾರ ಸೀಬರ್ಡ್ ‘ಕದಂಬ’ ನೌಕಾನೆಲೆ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ..

News Desk
1 Min Read

ಕಾರವಾರ: ಇಲ್ಲಿನ ಭಾರತೀಯ ನೌಕಾಪಡೆಯ ಸೀಬರ್ಡ್ ಕದಂಬ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕವನ್ನು ಅಳವಡಿಸಬೇಕು ಮತ್ತು ರಾಜ್ಯದ ಅಧಿಕೃತ ಭಾಷೆಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾಧ್ಯಕ್ಷರಾದ ಅರುಣ ಹರಕಡೆ ಅವರ ನೇತೃತ್ವದ ನಿಯೋಗವು ಈ ಮನವಿ ಪತ್ರವನ್ನು ನೀಡಲಾಯಿತು.

ಕರ್ನಾಟಕದ ಹೆಮ್ಮೆಯ ಪ್ರಥಮ ರಾಜವಂಶವಾದ ‘ಕದಂಬ’ ಹೆಸರನ್ನು ಈ ನೌಕಾನೆಲೆಗೆ ಇಡಲಾಗಿದೆ. ಆದರೆ, ನೂತನ ಮುಖ್ಯದ್ವಾರದ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಕನ್ನಡಿಗರ ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿದೆ. ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುವಾಗ ಆಯಾ ರಾಜ್ಯದ ಅಧಿಕೃತ ಭಾಷೆಗೆ ಗೌರವ ನೀಡುವುದು ಒಕ್ಕೂಟ ವ್ಯವಸ್ಥೆಯ ಆಶಯವಾಗಿದೆ. ಕದಂಬ ಎಂಬ ಹೆಸರಿನ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊಂದಿರುವ ಸಂಸ್ಥೆಯೇ ಕನ್ನಡವನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ಮನವಿ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸಂಬಂಧಪಟ್ಟ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸಾರ್ವಜನಿಕವಾಗಿ ಪ್ರದರ್ಶಿಸಲಾಗುವ ಎಲ್ಲಾ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಮುಖವಾಗಿ ಅಳವಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಒಂದು ವೇಳೆ 15 ದಿನಗಳೊಳಗೆ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಸೀಬರ್ಡ್ ಮುಖ್ಯದ್ವಾರದ ಬಳಿ ಬೃಹತ್ ಪ್ರತಿಭಟನೆ ಮತ್ತು ಜಾಗೃತಿ ಚಳವಳಿ ಹಮ್ಮಿಕೊಳ್ಳಲಾಗುವುದು. ಇದರಿಂದ ಉಂಟಾಗುವ ಕಾನೂನು-ಸುವ್ಯವಸ್ಥೆ ಸಮಸ್ಯೆಗೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಕರವೇ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ನಾಯಕ್, ಮತ್ತೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಪಾದ್ ಶೇಟ್, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಶ್ರೀಕಾಂತ ಪಟಗಾರ, ಕಾರವಾರ ನಗರ ಘಟಕದ ರಾಜ ನಾಯ್ಕ್, ಸದಸ್ಯರಾದ ಶಿವಾಜಿ ಸೇರಿದಂತೆ ವೇದಿಕೆಯ ಇತರ ಪ್ರಮುಖರು ಉಪಸ್ಥಿತರಿದ್ದರು.

Share This Article