ಅವ್ಯವಸ್ಥೆಗಳ ಆಗರವಾಗಿರುವ ಅಂಕೋಲಾ ಉಪ ನೋಂದಣಾಧಿಕಾರಿಗಳ ಕಛೇರಿ..! ಸಿಸಿಟಿವಿ ಹಾಗೂ ಬಯೋಮೆಟ್ರಿಕ್ ಅಟೆಂಡೆನ್ಸ್ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣವಾಯಿತೇ..?!

News Desk
1 Min Read

ಅಂಕೋಲಾ : ಅಂಕೋಲಾ ಉಪನೋಂದಣಾಧಿಕಾರಿಗಳ ಕಛೇರಿ ಈಗೀಗ ಅವ್ಯವಸ್ಥೆಗಳ ಆಗರವಾಗಿದೆ. ಹೌದು, ಒಂದು ಕಛೇರಿ ವ್ಯವಸ್ಥಿತವಾಗಿ ನಡೆಯುತ್ತಿದೆ ಅಂದರೆ, ಅಲ್ಲಿ ಕೆಲಸ ಮಾಡುವ ಅಧಿಕಾರಿಗಳ ಕಾರ್ಯ ಕ್ಷಮತೆ ಹಾಗೂ ಶಿಸ್ತಿನಿಂದ ಹಿಡಿದು ಕಚೇರಿಯಲ್ಲಿರುವ ಎಲ್ಲಾ ಸೌಲಭ್ಯಗಳು ಸಾಕ್ಷಿಯಾಗುತ್ತದೆ.

ಆದರೆ ಅಂಕೋಲಾ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ ಎನ್ನುವಂತೆ, ಬೆಳಿಗ್ಗೆ 11:15 ಗಂಟೆ ಆದರೂ ಸಹ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದೆ ಇರುವ ಕಾರಣ ನೋಂದಣಿ ಕೆಲಸ ಪ್ರಾರಂಭವಾಗುವುದಿಲ್ಲ. ಹೀಗಾದರೆ ನೋಂದಣಿ ಕೆಲಸ ಸಮಯಕ್ಕೆ ಸರಿಯಾಗಿ ಹೇಗೆ ಆಗುತ್ತದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕರ್ನಾಟಕ ಸಾರ್ವಜನಿಕ ಭದ್ರತಾ ಕಾಯ್ದೆ, 2017 ರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ/ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಉಪನೊಂದಣಿ ಕಚೇರಿಯು ಸಾರ್ವಜನಿಕ ಕಛೇರಿಯಾಗಿದ್ದು , ಇಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಆದರೆ “ರೋಗಿ ಬಯಸಿದ್ದು ಹಾಲು, ವೈದ್ಯ ಕೊಟ್ಟಿದ್ದು ಹಾಲು” ಎನ್ನುವಂತೆ ಕಚೇರಿಯಲ್ಲಿ ಸಿಸಿಟಿವಿ ಸಹ ಅಳವಡಿಸಿರುವುದಿಲ್ಲ, ಇದರಿಂದ ಸಹ ಅಧಿಕಾರಿಗಳಿಗೆ ಯಾವುದೇ ಹಿಡಿತ ಇಲ್ಲದಂತಾಗಿದೆ..

ಅಂಕೋಲಾದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಗೋಡೆ ಗಡಿಯಾರ ಹಾಗೂ ಬಯೋಮೆಟ್ರಿಕ್ ಅಟೆಂಡೆನ್ಸ್ ವ್ಯವಸ್ಥೆ ಇಲ್ಲದಿರುವುದು ಅಧಿಕಾರಿಗಳಿಗೆ ಹೋಳಿಗೆ ಮೇಲೆ ತುಪ್ಪ ಹಾಕಿಕೊಟ್ಟಂತೆ ಆಗಿದೆ.

ಸಿಸಿಟಿವಿ, ಬಯೋಮೆಟ್ರಿಕ್ ಅಟೆಂಡೆನ್ಸ್ ವ್ಯವಸ್ಥೆ ಇಲ್ಲದಿರುವುದರಿಂದ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ತಮ್ಮ ಶಿಸ್ತನ್ನು ಮರೆಯಲು ಸುಲಭವಾಗಬಹುದು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅಧಿಕಾರಿಗಳ ಬರುವಿಕೆಗೆ ಕಾದು ಕಾದು ಬೇಸತ್ತ ಜನಗಳ ಕಷ್ಟ ಕೇಳುವವರು ಯಾರು ಇಲ್ಲದಂತಾಗಿದೆ. ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಸಿಸಿಟಿವಿ ಹಾಗೂ ಬಯೊಮೆಟ್ರಿಕ್ ಉಪಕರಣ ಅಳವಡಿಸುವುದರ ಮೂಲಕವಾದರೂ ಸಹ ಅಧಿಕಾರಿಗಳಿಗೆ ಶಿಸ್ತು ಮತ್ತು ಸಮಯ ಪ್ರಜ್ಞೆಯ ಅರಿವನ್ನು ಮೂಡಿಸುವುದು ಅವಶ್ಯಕವಾಗಿದೆ.

Share This Article
Leave a Comment