“ಚರಂಡಿ ಇಲ್ಲದೆ ರಸ್ತೆ ಕಾಮಗಾರಿ: ನ್ಯಾಯಾಲಯ ವಿಚಾರಣೆಯಲ್ಲಿರುವ ಜಾಗದಲ್ಲಿಅಂಕೋಲಾ ಪುರಸಭೆಯ ವಿವಾದಾತ್ಮಕ ನಡೆ—ಸುಭಾಷ್ ನಾಯ್ಕ ಕಾನೂನು ಸವಾಲು”

News Desk
2 Min Read

ಅಂಕೋಲಾ ಪುರಸಭೆ ವ್ಯಾಪ್ತಿಯ ಹೊನ್ನೇಕೇರಿಯ ಸರ್ವೇ ನಂ. 61 ರ ಅನೇಕ ಹಿಸ್ಸಾದ ವಿವಾದಾತ್ಮಕ ಜಾಗದಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಪುರಸಭೆಯ ನಿರ್ದೇಶನದ ಮೇರೆಗೆ ಗುತ್ತಿಗೆದಾರರು ಜೆಸಿಬಿ ಯಂತ್ರದಿಂದ ಮಣ್ಣನ್ನು ಸಮತಟ್ಟುಗೊಳಿಸುವ ಮೂಲಕ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸಿದಂತೆಯೇ, ಸ್ಥಳೀಯ ವಾತಾವರಣ ಉದ್ವಿಗ್ನಗೊಂಡಿತು, ಏಕೆಂದರೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಯೋಜನೆ ಹೆಸರು, ಗುತ್ತಿಗೆದಾರ ವಿವರ, ಕಾಮಗಾರಿ ಮೊತ್ತ, ತಾಂತ್ರಿಕ ಅನುಮೋದನೆ ಮುಂತಾದ ವಿವರಗಳಿರುವ ನಾಮಫಲಕವಿಲ್ಲದೇ ಕೆಲಸ ಆರಂಭಿಸಲಾಗಿತ್ತು.

ಗುತ್ತಿಗೆದಾರರನ್ನು ವಿಚಾರಿಸಿದಾಗ ಅವರು “ಪುರಸಭೆಯಿಂದ ರಸ್ತೆ ಮಾಡಲು ಸೂಚನೆ ಬಂದಿದೆ; ಚರಂಡಿ ಎಸ್ಟಿಮೇಟಿನಲ್ಲಿ ಇಲ್ಲ” ಎಂದು ತಿಳಿಸಿದ ಹಿನ್ನಲೆಯಲ್ಲಿ, ಕಳೆದ 10ವರ್ಷಗಳಿಂದ ಇದೇ ಪ್ರದೇಶದಲ್ಲಿನ ನೈಸರ್ಗಿಕ ಚರಂಡಿ ಬಂದ್ ಮಾಡಿರುವುದರಿಂದ ಮನೆಗಳಿಗೆ ಮಳೆನೀರು ನುಗ್ಗುವ ಸಮಸ್ಯೆಯನ್ನು ನ್ಯಾಯಾಲಯದಲ್ಲಿ OS No.85/2015 ಅಡಿಯಲ್ಲಿ ಹೋರಾಟ ಮಾಡುತ್ತಿರುವ ಸುಭಾಷ್ ಗಂಗಾಧರ ನಾಯ್ಕ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಅವರು ಸ್ಥಳದಲ್ಲೇ “ಮಳೆನೀರು ಹಳ್ಳಕ್ಕೆ ಸೇರಲು ಇರುವ ನೈಸರ್ಗಿಕ ಮಾರ್ಗವೇ ಇಲ್ಲದಿದ್ದಾಗ ಚರಂಡಿ ಮಾಡದೆ ರಸ್ತೆ ಮಾಡಿದರೆ ಸಾರ್ವಜನಿಕರಿಗೆ ದುರಂತ ಅನಿವಾರ್ಯ, ವಿವಾದಾತ್ಮಕ ಜಾಗದ ಸ್ಥಿತಿಗತಿಯನ್ನು ಬದಲಾಯಿಸುವುದು Sub-Judice ನಿಯಮಕ್ಕೆ ವಿರುದ್ಧ” ಎಂದು ಸ್ಪಷ್ಟವಾಗಿ ಹೇಳಿದರು.

ಉದ್ವಿಗ್ನತೆ ಹೆಚ್ಚಿದಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಸಮಾಧಾನಪಡಿಸಿದರು. ನಂತರ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿದರೂ, ಸುಭಾಷ್ ನಾಯ್ಕರು ಎತ್ತಿದ “ಚರಂಡಿ ಇಲ್ಲದೇ ರಸ್ತೆ ಹೇಗೆ?”, “ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಕಾಮಗಾರಿ ಹೇಗೆ?”, “ನಾಮಫಲಕ ಯಾಕಿಲ್ಲ?”, “ಎಸ್ಟಿಮೆಂಟ್ ಪ್ರತಿಯನ್ನು ತೋರಿಸದಿರುವುದು ಹೇಗೆ?”, “19-11-2025ರಂದು ಸಲ್ಲಿಸಿದ ಸಾರ್ವಜನಿಕ ಅರ್ಜಿಗೆ ಉತ್ತರ ಏಕೆ ಇಲ್ಲ?” ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಯಾವುದೇ ತೃಪ್ತಿಕರ ಉತ್ತರ ದೊರಕದೆ, ಅವರು “ಯೋಜನೆ ಅನುಮೋದಿತವಾಗಿದೆ, ಕೆಲಸ ಮುಂದುವರಿಯಲಿ” ಎಂದಷ್ಟೇ ಹೇಳಿದರು.

ಈ ಬೆಳವಣಿಗೆಯ ಜತೆಗೆ, ಸುಭಾಷ್ ನಾಯ್ಕ ಅವರು ತಮ್ಮ ಪರ ವಕೀಲರ ಮೂಲಕ ನಿನ್ನೆ ದಿನಾಂಕ 6-12-2025ರ ಮಧ್ಯಾಹ್ನವೇ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಲೀಗಲ್ ನೋಟಿಸ್ ನೀಡಿದ್ದು, ನೋಟಿಸ್‌ನಲ್ಲಿ ಚರಂಡಿ ನಿರ್ಮಾಣವಿಲ್ಲದೇ ರಸ್ತೆ ನಿರ್ಮಾಣ ಕಾನೂನುಬಾಹಿರ, , ಮತ್ತು ಸಾರ್ವಜನಿಕ ಅರ್ಜಿಗೆ ಉತ್ತರ ನೀಡದೇ ನಿರ್ಲಕ್ಷ್ಯ ತೋರಿರುವುದು ಆಡಳಿತದ ಗಂಭೀರ ತಪ್ಪು ಎಂದು ದಾಖಲಿಸಲಾಗಿದೆ.

ನೋಟಿಸ್‌ನಲ್ಲಿ “ಮೊದಲು ಚರಂಡಿ ಸ್ಥಾಪನೆ – ನಂತರ ರಸ್ತೆ” ಎಂಬ ಶರತ್ತು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಈ ಘಟನೆಯ ಪರಿಣಾಮವಾಗಿ ಸುಭಾಷ್ ನಾಯ್ಕನ ಹೋರಾಟಕ್ಕೆ ಸ್ಥಳೀಯ ಸಾರ್ವಜನಿಕರ ಬೆಂಬಲ ಹೆಚ್ಚುತ್ತಿದ್ದು, ಚರಂಡಿ ಕಾಮಗಾರಿ ಕೈಗೊಳ್ಳದೆ ರಸ್ತೆ ಕಾಮಗಾರಿ ಮುಂದುವರಿಸಿದರೆ ಜನರು ಸುಭಾಷ್ ನಾಯ್ಕನ ಹೋರಾಟಕ್ಕೆ ಬೆಂಬಲ ನೀಡುವ ಸಾಧ್ಯತೆ ತೀವ್ರವಾಗಿದೆ ಮತ್ತು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸೂಚನೆಗಳು ವ್ಯಕ್ತವಾಗಿವೆ. ವಿಕಾಸ ವಾಹಿನಿ ಮುಂದಿನ ಬೆಳವಣಿಗೆಯನ್ನು ಹತ್ತಿರದಿಂದ ಹಿಂಬಾಲಿಸಲಿದೆ.

Share This Article