ಅಂಕೋಲಾ: ತಾಲೂಕಿನ ಹಿರಿಯ ನಿವೃತ್ತ ಅರಣ್ಯ ರಕ್ಷಕ, ಡಿ. ಎಂ. ನಾಯ್ಕ (84), ಅವರು ವಯೋಸಹಜ ಅನಾರೋಗ್ಯದಿಂದಾಗಿ ಬುಧವಾರ ಸಂಜೆ, (ಸೆಪ್ಟೆಂಬರ್ 3, 2025) ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಸವಾಲಿನ ಜೀವನ ಮತ್ತು ಸಾರ್ಥಕ ಸೇವೆ
ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು, ತಮ್ಮ ಸಹೋದರನ ಆಶ್ರಯದಲ್ಲಿ ಬೆಳೆದ ಡಿ. ಎಂ. ನಾಯ್ಕ ಅವರು, ಕಷ್ಟಗಳ ನಡುವೆಯೂ ಶಿಕ್ಷಣವನ್ನು ಪೂರ್ಣಗೊಳಿಸಿ ಅರಣ್ಯ ಇಲಾಖೆಗೆ ಸೇರಿದರು. ತಮ್ಮ ವೃತ್ತಿಜೀವನದುದ್ದಕ್ಕೂ ಅತ್ಯಂತ ಶಿಸ್ತುಬದ್ಧ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿ ಗುರುತಿಸಿ ಕೊಂಡಿದ್ದರು.
ಅವರು ಕುಂಬಾರವಾಡ, ಹಟ್ಟಿಕೇರಿ, ಅವರ್ಸ, ಶಿರೂರು, ಅಗಸೂರು, ಮತ್ತು ಹೊಸಗದ್ದೆ ಸೇರಿದಂತೆ ಹಲವೆಡೆ ಅರಣ್ಯ ರಕ್ಷಕರಾಗಿ ನಿಷ್ಠಾಪೂರ್ವಕ ಸೇವೆಯನ್ನು ಸಲ್ಲಿಸಿ, ಅರಣ್ಯ ಸಂರಕ್ಷಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕರ್ತವ್ಯದ ವಿಷಯದಲ್ಲಿ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದ ಅವರು ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.
ಮೂರು ವರ್ಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದ ಮೃತರು, ಓರ್ವ ಪುತ್ರಿ, ನಾಲ್ವರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

