ಅಂಕೋಲಾ, ಜುಲೈ 12: ಇಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಅಂಕೋಲಾ ತಾಲೂಕಿನ ಕೋಟೆವಾಡದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅಪಘಾತ ಸಂಭವಿಸಿದರೂ, ಪವಾಡ ಸದೃಶ ರೀತಿಯಲ್ಲಿ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರವಾರದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ KA 01 MP 3993 ನೊಂದಣಿಯ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ನುಗ್ಗಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯ ಭಾಗದಲ್ಲೇ ಬಿದ್ದರೂ, ಆ ಸಮಯದಲ್ಲಿ ಇತರ ವಾಹನಗಳು ಇಲ್ಲದಿರುವುದರಿಂದ ಭಾರೀ ಅನಾಹುತ ತಪ್ಪಿದೆ.
ಕಾರಿನಲ್ಲಿದ್ದ ಇಬ್ಬರು ಮಂಗಳೂರು ಮೂಲದ ಯುವಕರು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಕಾರಿನಲ್ಲಿ ಹೊಂದಿದ್ದ ಜೀವ ರಕ್ಷಕ ಏರ್ ಬಲೂನ್ (Airbag) ಓಪನ್ ಆದ ಕಾರಣ ಅವರ ಪ್ರಾಣ ಉಳಿದಿದೆ.
ಅಪಘಾತಕ್ಕೆ ಕಾರಣ, ಐಆರ್‌ಬಿ ಕಾಮಗಾರಿ ಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ಅದರಿಂದಲೇ ಕಾರು ನಿಯಂತ್ರಣ ತಪ್ಪಿರುವುದು ಎಂದು ತಿಳಿದು ಬಂದಿದೆ.ಘಟನೆ ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ಹುಲೊಳ್ಳಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ದಾವಿಸಿ ಪರಿಶೀಲನೆ ನಡೆಸಿ, ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ವಿದ್ಯುತ್ ಕಂಬವನ್ನು ರಾಷ್ಟ್ರೀಯ ಹೆದ್ದಾರಿಯಿಂದ ಪಕ್ಕಕ್ಕೆ ಸ್ಥಳಾಂತರಗೊಳಿಸಿದರು.

ಹೆಸ್ಕಾಂ ಇಲಾಖೆಯ ಅಧಿಕಾರಿಯಾದ ರಾಘು ನಾಯ್ಕ್ ಹಾಗೂ ಸಿಬ್ಬಂದಿಗಳು ಕೂಡ ಸ್ಥಳಕ್ಕೆ ಆಗಮಿಸಿ ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.ಪಿಎಸ್ಐ ಸುನಿಲ್ ಹುಲೊಳ್ಳಿ ಅವರು, “ರಸ್ತೆಯಲ್ಲಿ ನೀರು ನಿಂತಿರುವಂತಹ ಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಎಚ್ಚರಿಕೆ ನೀಡಲಾಗುತ್ತದೆ,” ಎಂದು ತಿಳಿಸಿದರು.
ಸ್ಥಳೀಯರ ಮಾತುಗಳ ಪ್ರಕಾರ, ಅಪಘಾತ ಸಂಭವಿಸಿದ ಸ್ಥಳದ ಬಳಿ ಇರುವ ಆಂಜನೇಯ ದೇವಾಲಯ ಮಹಿಮೆದಿಂದಲೇ ಈ ಇಬ್ಬರು ಯುವಕರು ಬದುಕುಳಿದಿದ್ದಾರೆ ಎಂದು ನಂಬಲಾಗುತ್ತಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ

