ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ JSW ಕಂಪನಿಯವರು ರೂಪಿಸಿರುವ ಗ್ರೀನ್ಫೀಲ್ಡ್ ವಾಣಿಜ್ಯ ಬಂದರು ಯೋಜನೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು, ತಮ್ಮ ಆಕ್ರೋಶವನ್ನು ಹೊರಹಾಕಿ ಸುಮಾರು 4000ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಇತ್ತೀಚೆಗೆ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆದ ಪರಿಸರ ಆಲಿಕೆ ಸಭೆಗೆ ನೂರಾರು ಜನರು ಆಗಮಿಸಿ ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ಹಂಚಿಕೊಂಡ್ದಿದ್ದು. ಸಭೆಯ ಪ್ರತಿಯೊಂದು ಮಾತು ಜನರ ಮನದಾಳದ ನೋವು ಹರಿದಾಡುತ್ತಿದೆ .
ಕೇಣಿ ಬಂದರನ್ನು ವಿರೋಧಿಸಿ ಪಬ್ಲಿಕ್ ಹಿಯರಿಂಗ್ ನಲ್ಲಿ ಬಡಗೇರಿಯ ಮಹೇಶ್ ನಾಗಪ್ಪ ಗೌಡ ಅವರು ಮಾತನಾಡಿ,
“ಈ ಸಭೆಗೆ ಅರಣ್ಯ ಇಲಾಖೆಯವರು ಬಂದಿದ್ದಾರೆ ಏನು? ಕೇಣಿ ಪ್ರದೇಶದಲ್ಲಿ ಬೋರ್ಡ್ ಹಾಕಿದ್ದರು – ಇಲ್ಲಿ ಆಮೆಯ ಸಂತತಿ ಬೆಳೆಯುತ್ತಿದೆ ಎಂದು. ಆದರೆ ಈಗ EIA ವರದಿಯಲ್ಲಿ ಆಮೆ ಸಂತತಿ ಇಲ್ಲ ಎಂದು ಬರೆಯಲಾಗಿದೆ. ಈ ಹಿಂದೆ ಇದ್ದ ಆಮೆಗಳು ಎಲ್ಲಿ ಹೋದವು? JSW ಕಂಪನಿಯವರು ಫೋನ್ ಮಾಡಿ 2 ಕಿಲೋ ಮೀಟರ್ ದೂರ ಕಳುಹಿಸಿದರೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಕಂಪನಿಯವರ ಸುಳ್ಳು ಹೇಳಿಕೆಯನ್ನು ಅವರು ಕಟುವಾಗಿ ಟೀಕಿಸಿದ್ದು, ಅವರ ಮಾತುಗಳು ಸಭೆಯೊಳಗೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿವೆ. ಮಹೇಶ್ ಗೌಡ ರವರ ಮಾತಿನ ಜೊತೆ ಕೇಣಿ ಪ್ರದೇಶದಲ್ಲಿ ಆಮೆಗಳು ಮೊಟ್ಟೆ ಇಡುವ ಹಾಗೂ ಮರಿಗಳು ಹೋಗುತ್ತಿರುವ ವಿಡಿಯೋವನ್ನು ಸೇರಿಸಿ ವೈರಲ್ ಆಗುತ್ತಿದೆ. ವಾಸ್ತವಕ್ಕೆ ಹತ್ತಿರವಾಗಿರುವ ಈ ನಿದರ್ಶನ ಜನರ ಕೋಪಕ್ಕೆ ಇದು ಇನ್ನಷ್ಟು ತೀವ್ರತೆ ನೀಡಿದೆ.
ಅದೇ ರೀತಿ, ಸಾವಿತ್ರಿ ಕಲ್ಮಟ್ ಎಂಬ ಮಹಿಳೆ ಕನ್ನಡದಲ್ಲಿ ಹಾಗೂ ನಂತರ ಹಿಂದಿಯಲ್ಲಿ ಮಾತನಾಡುತ್ತಾ,
“ನಾನು 5ನೇ ತರಗತಿ ತನಕ ಓದಿದ್ದೇನೆ. ಆದರೆ ಈ ಬಂದರು ಯೋಜನೆ ನಮಗೆ ಬೇಡವೇ ಬೇಡ. ದಿಲ್ಲಿಯಲ್ಲಿ ನಿಮಗೆ ನಮ್ಮ ಕನ್ನಡ ಅರ್ಥವಾಗದಿದ್ದರೆ, ನಾನು ಹಿಂದಿಯಲ್ಲೂ ಹೇಳುತ್ತೇನೆ,” ಈ ಯೋಜನೆ ಬೇಡವೆಂದು ಘೋಷಣೆ ಮಾಡಿದಾಗ ಸಭೆಯೇ ಹುಬ್ಬೇರಿಸಿತು.

ಅವರ ಆಕ್ರೋಶ ಭರಿತ ಮಾತುಗಳು ಎಲ್ಲರ ಮನದಲ್ಲೂ ಪುನೀತ್ ರಾಜಕುಮಾರ್ ಅಭಿನಯದ “ವೀರ ಕನ್ನಡಿಗ” ಚಲನಚಿತ್ರದ ಖಡಕ್ ಡೈಲಾಗ್ ಅನ್ನು ನೆನಪಿಸುವಂತಾಗಿತ್ತು. ಇದೀಗ ಆಕೆಯ ಭಾಷಣದ ವಿಡಿಯೋ ವೈರಲ್ ಆಗಿ ಜನರ ಆಕ್ರೋಶಕ್ಕೆ ಮತ್ತಷ್ಟು ಬಲ ತುಂಬಿದೆ.
ಕಂಪನಿಯ ಮುಂದಿನ ಹೆಜ್ಜೆಗಳು:
ಸಾರ್ವಜನಿಕ ವಿಚಾರಣೆಯಲ್ಲಿ ತೀವ್ರ ವಿರೋಧ ವ್ಯಕ್ತವಾದರೂ, ಕಂಪನಿಯವರು EIA ವರದಿಯನ್ನು ತಿದ್ದುಪಡಿಸಿ ಮತ್ತೆ ಸಲ್ಲಿಸುವ ಸಾಧ್ಯತೆ ಇದೆ. ಜೊತೆಗೆ “ಉದ್ಯೋಗ ಸೃಷ್ಟಿ, ಸ್ಥಳೀಯ ಅಭಿವೃದ್ಧಿ, ಮೂಲಸೌಕರ್ಯ” ಎಂಬ ಭರವಸೆಗಳನ್ನು ಮುಂದಿಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೆಂಬಲ ಪಡೆಯಲು ಪ್ರಯತ್ನಿಸಬಹುದು. ಮುಂದಿನ ಹಂತದಲ್ಲಿ MoEFCC (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ) ವರದಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ದೇಶದ ಇತರ ಉದಾಹರಣೆಗಳು: ಭಾರತದ ಇತರ ರಾಜ್ಯಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾದ ಉದಾಹರಣೆಗಳಿವೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ನಡೆದ ಕೆಲವು ಬಂದರು ಯೋಜನೆಗಳಿಗೆ ಪಬ್ಲಿಕ್ ಹಿಯರಿಂಗ್‌ನಲ್ಲಿ ವಿರೋಧ ದಾಖಲಾಗಿದ್ದರೂ, ನಂತರದಲ್ಲಿ ಸರ್ಕಾರವು ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. “ಅಭಿವೃದ್ಧಿ – ಉದ್ಯೋಗ” ಎಂಬ ಕಾರಣ ನೀಡುತ್ತಾ ಪರಿಸರದ ಬಗ್ಗೆ ಎತ್ತಲಾದ ಪ್ರಶ್ನೆಗಳನ್ನು ಕಡೆಗಣಿಸಿದ ಪ್ರಕರಣಗಳೂ ಉಂಟು. ಈ ಹಿನ್ನೆಲೆಯಲ್ಲಿ ಕೇಣಿ ಬಂದರು ಯೋಜನೆಯ ಭವಿಷ್ಯದಲ್ಲಿಯೂ ಇದೇ ರೀತಿಯ ಬೆಳವಣಿಗೆ ಸಂಭವಿಸಬಹುದೆಂಬ ಆತಂಕ ವ್ಯಕ್ತವಾಗಿದೆ.

ಗ್ರೀನ್ ಸಿಗ್ನಲ್ ಸಿಕ್ಕರೆ ಜನರ ಹೋರಾಟ: ಒಂದು ವೇಳೆ ಯೋಜನೆಗೆ ಅಂತಿಮ ಅನುಮತಿ ಸಿಕ್ಕರೆ, ಸಾರ್ವಜನಿಕರ ಹೋರಾಟ ಶಾಂತವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಸ್ಥಳೀಯ ರೈತರು, ಮೀನುಗಾರರು ಹಾಗೂ ಪರಿಸರ ಹೋರಾಟಗಾರರು ಕಾನೂನು ಹಾದಿಯನ್ನು ಹಿಡಿಯುವ ಸಾಧ್ಯತೆ ಇದೆ – NGT, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪರಿಸರ ಮತ್ತು ಜೀವನೋಪಾಯವನ್ನು ರಕ್ಷಿಸಲು ಒತ್ತಾಯ ಮಾಡಬಹುದು. ಜೊತೆಗೆ ಶಾಂತಿಯುತ ಪ್ರತಿಭಟನೆಗಳು, ಜಾಗೃತಿ ಅಭಿಯಾನಗಳು ಹಾಗೂ ಮಾಧ್ಯಮದ ಮೂಲಕ ವಿಷಯವನ್ನು ದೇಶವ್ಯಾಪಿ ಎತ್ತಿಹಿಡಿಯುವ ದಾರಿ ಹಿಡಿಯಬಹುದು.
ಜನರ ಸಂಕಲ್ಪ: ಕೇಣಿಯ ಜನತೆ ಸ್ಪಷ್ಟವಾಗಿ ಹೇಳಿದ್ದಾರೆ – “ನಮ್ಮ ಭೂಮಿ, ನಮ್ಮ ಸಮುದ್ರ, ನಮ್ಮ ಬದುಕು – ಬಂದರು ಬೇಡ.” ಪರಿಸರ ಸಂವೇದನಾಶೀಲ ಪ್ರದೇಶದಲ್ಲಿ ದೊಡ್ಡ ಮಟ್ಟದ ಕೈಗಾರಿಕಾ ಯೋಜನೆ ಬೇಡವೆಂಬ ಸಾರ್ವಜನಿಕ ಧ್ವನಿ ಈಗ ಬಲವಾಗಿದ್ದು, ಹೋರಾಟ ಹಿಂಜರಿಯದೇ ಮುಂದುವರಿಯುವುದೇ ಖಚಿತವಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ

