ಅಂಕೋಲಾ ಸಾರಿಗೆ ಘಟಕದಲ್ಲಿ ಗಣೇಶೋತ್ಸವ -ಭಕ್ತಿ ಸಂಭ್ರಮ..

News Desk
2 Min Read

ಅಂಕೋಲಾ : ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದ ಅಂಕೋಲ ಘಟಕದಲ್ಲಿ ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿ ಅಂಕೋಲ ಸಮಿತಿಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಿ ಭಾವದಿಂದ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಮಹಾಗಣಪತಿ ಗಣೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 27ರಂದು ಸಾರಿಗೆ ಸಿಬ್ಬಂದಿಗಳು ಶ್ರದ್ಧಾ–ಭಕ್ತಿಯಿಂದ ವಿಘ್ನನಿವಾರಕ ವಿನಾಯಕನನ್ನು ಸಾರಿಗೆ ಘಟಕದಲ್ಲಿ ಪ್ರತಿಷ್ಠಾಪಿಸಿ, ನೈವೇದ್ಯ, ಪೂಜೆ ಹಾಗೂ ಭಜನೆಗಳೊಂದಿಗೆ ವಿಘ್ನ ನಿವಾರಕನನ್ನು ಆರಾಧಿಸಲಾಯಿತು.

ನಿನ್ನೆ ದಿನಾಂಕ 29-08-2025 ಶುಕ್ರವಾರದಂದು ಸತ್ಯನಾರಾಯಣ ಕಥೆ ಹಾಗೂ ಅನ್ನಸಂತರ್ಪಣೆಯ ಕಾರ್ಯಕ್ರಮವನ್ನು ಭಕ್ತಿಪೂರ್ಣ ವಾತಾವರಣದಲ್ಲಿ ಆಯೋಜಿಸಲಾಗಿತ್ತು. ಸಾರಿಗೆ ಸಿಬ್ಬಂದಿಗಳ ಕುಟುಂಬಗಳು ಹಾಗೂ ಭಕ್ತರು ಹರ್ಷೋಲ್ಲಾಸದಿಂದ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು. ಸತ್ಯನಾರಾಯಣ ಪೂಜೆಯನ್ನು ರಾಜೇಶ್ ನಾಯಕ ದಂಪತಿಗಳು ವಹಿಸಿಕೊಂಡಿದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಊಟದ ವ್ಯವಸ್ಥೆಯನ್ನು ಕೆ.ವಿ. ನಾಯಕರು ದಾನಿಗಳು ನೀಡಿದರು. ಭಕ್ತಾದಿಗಳಿಗೆ ಪಾಯಸವನ್ನು ಗಣಪತಿ ವಿ. ಶೆಟ್ಟಿಯವರು ಜೊತೆಗೆ ಇನ್ನಿತರ ಹಲವು ದಾನಿಗಳು ವಸ್ತು ರೂಪದಲ್ಲಿ ದಾನ ಮಾಡಿದರು. ಅಂಕೋಲಾ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರು ಹಾಗೂ ಇತರ ಸಿಬ್ಬಂದಿಗಳು ಹಣದ ರೂಪದಲ್ಲಿ ದೇವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಈ ವರ್ಷದ ಗಣೇಶೋತ್ಸವದಲ್ಲಿ ಘಟಕ ವ್ಯವಸ್ಥಾಪಕಿ ಶ್ರೀಮತಿ ಚೈತನ್ಯ ಅಗಳಗಟ್ಟಿ ಗೌರವಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದು, ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷತೆಯನ್ನು ಚಾಲಕ ದಿಲೀಪ್ ಜೆ. ನಾಯ್ಕ, ಕಾರ್ಯದರ್ಶಿಯಾಗಿ ಸಾಗರ ಎಸ್. ನಾಯ್ಕ, ಖಜಾಂಚಿಯಾಗಿ ದೀಪಕ್ ಎಸ್. ನಾಯ್ಕ ಹಾಗೂ ಘಟಕದ 10 ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಗಳು ಉತ್ಸವ ಸಮಿತಿಯ ಸದಸ್ಯರಾಗಿ ನಿಷ್ಠೆಯಿಂದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ತಮ್ಮ ಕಾರ್ಯಬದ್ಧತೆಯ ಮಧ್ಯೆಯೂ ಯಾವುದೇ ಬಸ್‌ಗಳ ಕಾರ್ಯಾಚರಣೆಗೆ ಅಡಚಣೆ ಆಗದಂತೆ ಉತ್ಸವವನ್ನು ಯಶಸ್ವಿಯಾಗಿ ಸಾಗಿಸುತ್ತಿರುವುದು ಸಾರ್ವಜನಿಕರಿಂದ ಶ್ಲಾಘನೀಯವಾಗಿದೆ.

ಪ್ರಸಾದ ವಿತರಣೆ ಕಾರ್ಯದಲ್ಲಿ ಮಹೇಶ, ನಾರಾಯಣ ಆಚಾರಿ ಹಾಗೂ ಘಟಕದ ಭದ್ರತಾ ಸಿಬ್ಬಂದಿಗಳು ಸೇವೆ ಸಲ್ಲಿಸಿದರು.ಅಂಕೋಲ ಸಾರಿಗೆ ಘಟಕದ ಸಿಬ್ಬಂದಿಗಳು ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಿ, ಸೇವಾ ಮನೋಭಾವ ಮತ್ತು ಏಕತೆ ಪ್ರದರ್ಶಿಸುತ್ತಿದ್ದಾರೆ. ಗಣೇಶನ ಆರಾಧನೆಯ ಮೂಲಕ ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖಶಾಂತಿಯು ನೆಲೆಸಲೆಂದು ಸಾರಿಗೆ ಸಿಬ್ಬಂದಿಗಳ ಪ್ರಾರ್ಥನೆ.

ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳು ಹೀಗೆ ಮುಂದುವರಿಯಲಿವೆ : ಆಗಸ್ಟ್ 30 ರಂದು ಮಹಾಪೂಜೆ, ಆಗಸ್ಟ್ 31ರಂದು ಗಣೇಶನ ಮೂರ್ತಿ ಕೇಣಿಯಲ್ಲಿ ವಿಸರ್ಜನೆ ನೆರವೇರಲಿದೆ. ಶ್ರೀ ಮಹಾಗಣಪತಿಯ ಆಶೀರ್ವಾದದಿಂದ ಸಾರ್ವಜನಿಕ ಜೀವನದಲ್ಲಿ ಸುಖ–ಸಮೃದ್ಧಿ ನೆಲೆಸಲೆಂದು ಎಲ್ಲರೂ ಹಾರೈಸುತ್ತಿದ್ದಾರೆ.

Share This Article