ಆದರ್ಶ ಸೇವೆಯ ಹಾದಿ ಪೂರ್ತಿ: ಪ್ರಶಸ್ತಿ ಪುರಸ್ಕೃತ, ಹಿರಿಯ ಚಾಲಕ ಅಶೋಕ ನಾಯಕರಿಗೆ ನಿವೃತ್ತಿ ಗೌರವ..

News Desk
1 Min Read

ಅಂಕೋಲಾ: ಅಪಘಾತ ರಹಿತ ಚಾಲನೆಯ ಮಾದರಿ, ಶಿಸ್ತು ಮತ್ತು ಸೇವಾ ಭಾವನೆಯ ಜೀವಂತ ಉದಾಹರಣೆಯಾದ ಹಿಲ್ಲೂರಿನ ಅಶೋಕ ರಾಮಾ ನಾಯಕ ಅವರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಳೆದ 35 ವರ್ಷಗಳ ಚಾಲಕರಾಗಿ ಅವಿರತ ಸೇವೆ ಸಲ್ಲಿಸಿ ಬುಧವಾರ ಗೌರವಪೂರ್ವಕವಾಗಿ ನಿವೃತ್ತರಾದರು.

ಅಶೋಕ ನಾಯಕರು ಕೇವಲ ವಾಹನ ಚಲಾಯಿಸುತ್ತಲೇ ಅವರು ಅಳವಡಿಸಿಕೊಂಡಿದ್ದ ಶ್ರದ್ಧೆ, ಸಮಯಪಾಲನೆ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತು ಪ್ರದರ್ಶಿಸಿದ ಜವಾಬ್ದಾರಿಯು ಸಹೋದ್ಯೋಗಿಗಳಿಗೂ ಮಾದರಿಯಾಗಿದೆ. ಈ ಅನನ್ಯ ಸೇವೆಗೆ ಸಂಸ್ಥೆಯು ಪ್ರಶಂಸೆಯಾಗಿ ಚಿನ್ನದ ಮತ್ತು ಬೆಳ್ಳಿ ಪದಕಗಳನ್ನು ಅಶೋಕ ನಾಯಕರಿಗೆ ನೀಡಿದ್ದು, ಅವರು ಸಂಸ್ಥೆಯಲ್ಲಿ ಅಪಘಾತರಹಿತ ಚಾಲಕರಾಗಿ ಗೌರವಿಸಲ್ಪಟ್ಟಿದ್ದರು.

ಅವರ ಸೇವೆಯನ್ನು ಸ್ಮರಿಸುವ ಪ್ರಯತ್ನವಾಗಿ ಅಂಕೋಲಾ ಸಾರಿಗೆ ಘಟಕದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಅಶೋಕ ನಾಯಕರಿಗೆ ಮೈಸೂರ ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ, ವಿಜೃಂಭಿತ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಸಣ್ಣ ಮಾತು, ದೊಡ್ಡ ಕಾರ್ಯ ಎಂಬ ತತ್ತ್ವವನ್ನು ಹತ್ತಿರದಿಂದ ಅನುಸರಿಸಿದ ಅವರ ವೃತ್ತಿ ಜೀವನವು, ಮುಂದಿನ ತಲೆಮಾರಿಗೆ ದಾರಿದೀಪವಾಗಲಿದೆ ಎಂದು ಸಂಸ್ಥೆಯ ಸಿಬ್ಬಂದಿಗಳು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಚಾರ ಅಧೀಕ್ಷಕ ಶಿವಾನಂದ ನಾಯ್ಕ, ಸಹಾಯಕ ಸಂಚಾರ ಅಧೀಕ್ಷಕ ರವಿ ನಾಯ್ಕ, ನಾರಾಯಣ ಹುಲುಸ್ವಾರ್, ನಾಗೇಶ್ ನಾಯ್ಕ, ವಿನಾಯಕ ನಾಯ್ಕ, ವೆಂಕಟರಮಣ ನಾಯ್ಕ, ಮಹಾಲಕ್ಷ್ಮಿ ನಾಯ್ಕ, ವೇದ ನಾಯ್ಕ, ಪ್ರತಿಮಾ ಶೆಟ್ಟಿ, ಶಶಿಕಲಾ ಗೌಡ, ಏಜಾಜ್ ಖಾನ್ ಮತ್ತು ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ದಿಲೀಪ್ ನಾಯ್ಕ ಮತ್ತು ಗಂಗರಾಜು ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ನಿರೂಪಣೆಯನ್ನು ಎಸ್.ಆರ್. ಬಂಟರವರು ನೆರವೇರಿಸಿದರು.

ಅಂಕೋಲಾ ಘಟಕ ವ್ಯವಸ್ಥಾಪಕಿ ಚೈತನ್ ಅಗಳಗಟ್ಟಿ ಅವರು ಮಾತನಾಡಿ ಅಶೋಕ ನಾಯಕರು ನಿವೃತ್ತಿಯಾದರೂ ಅವರ ಅನುಭವ ಮತ್ತು ಆದರ್ಶಗಳು ಸಂಸ್ಥೆಯೊಳಗೆ ಸದಾ ಜೀವಂತವಾಗಿರಲಿದೆ. ಎಂದು ಅಶೋಕ್ ನಾಯಕರಿಗೆ ಶುಭ ಹಾರೈಕೆಯೊಂದಿಗೆ ಅಂಕೋಲದ ಸಾರಿಗೆ ಘಟಕದಲ್ಲಿ ನಡೆದ ಕಾರ್ಯಕ್ರಮ ಸಮಾರೋಪಗೊಂಡಿತು.

Share This Article
Leave a Comment