ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನ ಪ್ರಕರಣ: ಶಾಸಕ ಸತೀಶ್ ಸೈಲ್ ಮೇಲಿನ ‘ಆಧಾರ ರಹಿತ’ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ತೀವ್ರ ಖಂಡನೆ..

News Desk
2 Min Read

ಕಾರವಾರ: ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರು ತಮ್ಮ ಮೇಲಿನ ಹಲ್ಲೆ ಯತ್ನ ಪ್ರಕರಣದಲ್ಲಿ ವಿನಾಕಾರಣ ಶಾಸಕ ಸತೀಶ್ ಸೈಲ್ ಅವರ ಹೆಸರನ್ನು ಪರೋಕ್ಷವಾಗಿ ಎಳೆದು ತರುತ್ತಿರುವುದು ಕಾಂಗ್ರೆಸ್ ಪಕ್ಷದ ಹಾಗೂ ಶಾಸಕರ ಘನತೆಗೆ ಹಾನಿ ಉಂಟುಮಾಡಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ, ಆಧಾರರಹಿತ ಹೇಳಿಕೆ ನೀಡಿದ್ದರೆ ಅವರ ವಿರುದ್ಧವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಆಗ್ರಹಿಸಿದ್ದಾರೆ.

ಸೋಮವಾರ ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,”ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಣಾಂತಿಕ ಹಲ್ಲೆ ಯತ್ನ ನಡೆದಿದೆ. ಅವರಿಗೆ ಯಾರ ಮೇಲಾದರೂ ಅನುಮಾನವಿದ್ದರೆ, ಸಹಜವಾಗಿ ಅದನ್ನು ಲಿಖಿತ ರೂಪದಲ್ಲಿ ಪೊಲೀಸರಿಗೆ ತಿಳಿಸಬೇಕಿತ್ತು. ಆದರೆ, ಅವರು ಹಾಗೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಬದಲಾಗಿ, ನೇರವಾಗಿ ಮಾಧ್ಯಮಗಳ ಮುಂದೆ ಬಂದು ತಮ್ಮ ಹತ್ಯೆಗೆ ಸುಪಾರಿ ಕೊಟ್ಟವರ ಜೊತೆ ಶಾಸಕ ಸತೀಶ್ ಸೈಲ್ ಸಂಪರ್ಕದಲ್ಲಿದ್ದಾರೆ ಎಂಬಂತೆ ಭಾವನೆ ಮೂಡಿಸುತ್ತಿದ್ದಾರೆ,” ಎಂದು ಶಂಭು ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

“ನಾನು ಚುನಾವಣೆಗೆ ನಿಲ್ಲುವ ವ್ಯಕ್ತಿ, ನನಗೂ ಶಾಸಕ ಸೈಲ್ ಅವರಿಗೂ ರಾಜಕೀಯ ದ್ವೇಷವಿದೆ ಎಂದು ಮಾಧ್ಯಮಗಳ ಮುಂದೆ ಹೇಳುವ ಮೂಲಕ, ಶಾಸಕರ ಹೆಸರನ್ನು ವಿನಾಕಾರಣ ಎಳೆದು ತಂದಿದ್ದು ತಪ್ಪು. ಇದರಿಂದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ನೋವಾಗಿದೆ. ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಗೊಂದಲ ಮತ್ತು ಅಶಾಂತಿ ಉಂಟಾಗುವ ಸಾಧ್ಯತೆ ಇದೆ,” ಎಂದರು.

ಸೈಲ್ ಪಾತ್ರವಿದ್ದರೆ ಎಫ್‌ಐಆರ್ ದಾಖಲಿಸಲಿ, ಇಲ್ಲವಾದರೆ ಗೋಪಾಲ್ ವಿರುದ್ಧ ಕ್ರಮ ಕೈಗೊಳ್ಳಿ:

“ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಒಂದು ವೇಳೆ ಹಲ್ಲೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಅವರ ಪಾತ್ರ ಅಥವಾ ಬೆಂಬಲ ಇರುವುದು ಸಾಬೀತಾದರೆ, ನಿರ್ದಾಕ್ಷಿಣ್ಯವಾಗಿ ಅವರ ಮೇಲೆಯೇ ಎಫ್‌ಐಆರ್ ದಾಖಲಿಸಲಿ. ಆದರೆ, ಕೇವಲ ಭಾವನಾತ್ಮಕ ಹೇಳಿಕೆಗಳನ್ನು ನೀಡಿ, ಸಮಾಜದಲ್ಲಿ ಗೊಂದಲ ಸೃಷ್ಟಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಗೋಪಾಲಕೃಷ್ಣ ನಾಯಕ ಅವರ ಮೇಲೆಯೇ ಸೂಕ್ತ ಪ್ರಕರಣ ದಾಖಲಿಸಬೇಕು,” ಎಂದು ಅವರು ನುಡಿದರು.

ಶಾಸಕ ಸೈಲ್ ಪಾತ್ರವಿಲ್ಲ ಎಂದ ಸಾಯಿ ಗಾಂವಕರ್, ಹೇಳಿಕೆ ಹಿಂಪಡೆಯಲು ಸಮೀರ್ ನಾಯ್ಕ್ ಆಗ್ರಹ:

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, “ಹಲ್ಲೆ ಪ್ರಕರಣವನ್ನು ಕಾಂಗ್ರೆಸ್ ಖಂಡಿಸುತ್ತದೆ. ಈಗಾಗಲೇ 9 ಜನರ ಬಂಧನವಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ನಾನು ಶಾಸಕ ಸತೀಶ್ ಸೈಲ್ ಅವರನ್ನು ಹತ್ತಿರದಿಂದ ಬಲ್ಲೆ, ಅವರು ಇಂತಹ ಕೃತ್ಯ ಮಾಡುವ ವ್ಯಕ್ತಿಯಲ್ಲ. ಇದರಲ್ಲಿ ಅವರ ಪಾತ್ರವಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ,” ಎಂದು ಸಮರ್ಥಿಸಿಕೊಂಡರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಮೀರ್ ನಾಯ್ಕ ಮಾತನಾಡಿ, “ಶಾಸಕರ ಬಗ್ಗೆ ಮಾಡಿರುವ ಆಧಾರರಹಿತ ಆರೋಪವನ್ನು ಗೋಪಾಲಕೃಷ್ಣ ನಾಯಕ ಅವರು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಅವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟ್ಕರ್, ಕೃಷ್ಣ ಮೆಹತಾ, ನೂತನ್ ಜೈನ್, ಸುಹಾನಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Share This Article
Leave a Comment