ಅಂಕೋಲಾ: ಕನ್ನಡ ನಾಡು-ನುಡಿಯ ಕಂಪನ್ನು ಪಸರಿಸುವ ಮತ್ತು ಸ್ಥಳೀಯ ಕಲಾ ವೈಭವವನ್ನು ಅನಾವರಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕರ್ನಾಟಕ ರಣಧೀರರ ವೇದಿಕೆಯ ವತಿಯಿಂದ ಇದೇ ಫೆಬ್ರವರಿ 1 ರಂದು ಪಟ್ಟಣದ ಜೈಹಿಂದ್ ಮೈದಾನದಲ್ಲಿ ‘ಕರಾವಳಿ ಕನ್ನಡ ಹಬ್ಬ’ವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಅಂದು ಸಂಜೆ 5 ಗಂಟೆಗೆ ವರ್ಣರಂಜಿತ ನೃತ್ಯ ಸ್ಪರ್ಧೆಯೊಂದಿಗೆ ಆರಂಭವಾಗಲಿದ್ದು, ಸ್ಥಳೀಯ ಪ್ರತಿಭೆಗಳು ಕರಾವಳಿಯ ಜಾನಪದ ಹಾಗೂ ಕನ್ನಡದ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದಾರೆ.

ಸಾಧಕರಿಗೆ ಸನ್ಮಾನ: ಸಂಜೆ 7 ಗಂಟೆಗೆ ನಡೆಯಲಿರುವ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಕಲೆ, ಸಾಹಿತ್ಯ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಸನ್ಮಾನ ನೆರವೇರಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮ ಕನ್ನಡದ ಅಭಿಮಾನವನ್ನು ಹೆಚ್ಚಿಸುವ ಗುರಿ ಹೊಂದಿದೆ.
ನಂತರ ರಾತ್ರಿ 9 ರಿಂದ 10:30 ಗಂಟೆಯವರೆಗೆ ವಿಶೇಷ ಸಂಗೀತ ರಸಮಂಜರಿ ಕಾರ್ಯಕ್ರಮ ಜನರಿಗೆ ಮನರಂಜನೆ ನಡೆಯಲಿದೆ.

ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗಾಗಿ ಸಂಘಟನೆಯ ಪದಾಧಿಕಾರಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದು, ಯಾವುದೇ ಪ್ರತಿಫಲಾ ಪೇಕ್ಷೆಯಿಲ್ಲದೆ ಕೇವಲ ಕನ್ನಡದ ಮೇಲಿನ ಪ್ರೀತಿಯಿಂದ ದುಡಿಯುತ್ತಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೂರಜ ಪಾಂಡುರಂಗ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ವಿಷ್ಣು ನಾಯ್ಕ, ಜಿಲ್ಲಾ ಘಟಕದ ಸದಸ್ಯರಾದ ಐಶ್ವರ್ಯ ವಿಷ್ಣು ನಾಯ್ಕ, ಮಹೇಶ ನಾಗಪ್ಪ ಗೌಡ ಹಾಗೂ ದಿಲೀಪ ನಾಯ್ಕ ಉಪಸ್ಥಿತರಿದ್ದರು.

