ಅಂಕೋಲಾದಲ್ಲಿ ಬಿಪಿಎಲ್ ಚೀಟಿ ಕಳೆದುಕೊಂಡ ನೂರಾರು ಬಡ ಕುಟುಂಬಗಳು ಸಂಕಷ್ಟದಲ್ಲಿ – ವಿಚಾರಣೆ ಇಲ್ಲದೇ ರದ್ದಾದ ಬಿಪಿಎಲ್ ಕಾರ್ಡ್ ಗಳು-ಸರ್ಕಾರದ ಕ್ರಮ ಜನರಲ್ಲಿ ಆಕ್ರೋಶ..

News Desk
2 Min Read

ಅಂಕೋಲಾ ತಾಲೂಕಿನಲ್ಲಿ ಬಡ ಕುಟುಂಬಗಳ ಬದುಕಿಗೆ ಆಧಾರವಾಗಿದ್ದ 909 ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಗೊಂಡಿವೆ. ಈಗಾಗಲೇ 387 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದ್ದು, ಉಳಿದವರಿಗೂ ಅದೇ ಪ್ರಕ್ರಿಯೆ ಮುಂದುವರಿಯುತ್ತಿದೆ. ಒಂದು ತಿಂಗಳ ಹಿಂದೆ ಕಮಿಷನರ್ ಕಚೇರಿಯಿಂದ ಉಪ ನಿರ್ದೇಶಕರ ಕಚೇರಿ ಕಾರವಾರಕ್ಕೆ, ಅಲ್ಲಿಂದ ಅಂಕೋಲಾ ತಾಲೂಕು ಕಚೇರಿಗೆ ಪತ್ರ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸರ್ಕಾರವು ನಿಗದಿಪಡಿಸಿರುವ ವಾರ್ಷಿಕ ಆದಾಯ ₹1,20,000 ಮಿತಿಯನ್ನು ಮೀರುವವರ ಬಿಪಿಎಲ್ ಹಕ್ಕು ರದ್ದು ಮಾಡುವಂತೆ ಆದೇಶಿಸಿದರೂ, ಜನರ ನೈಜ ಜೀವನ ಸ್ಥಿತಿ ಇದಕ್ಕಿಂತ ಸಂಪೂರ್ಣ ವಿಭಿನ್ನವಾಗಿದೆ. ಸಾಲಕ್ಕಾಗಿ ಅಥವಾ ಸಣ್ಣ ಉದ್ಯೋಗಕ್ಕಾಗಿ ಬ್ಯಾಂಕ್ ವ್ಯವಹಾರ ನಡೆಸಿದರೆ, ಅಡವಿಟ್ಟ ಚಿನ್ನದ ಹಣ ಖಾತೆಗೆ ಬಂದರೆ ಅಥವಾ ಎಲ್‌ಐಸಿ ಮೊತ್ತ ಜಮೆಯಾಗಿದೆಯೆಂದು ದಾಖಲಾದರೆ — ಅದನ್ನೇ “ಆದಾಯ” ಎಂದು ಪರಿಗಣಿಸಿ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ.

ಹಲವಾರು ವರ್ಷಗಳಿಂದ ಬಿಪಿಎಲ್ ಪಡಿತರದಿಂದ ಬದುಕು ಸಾಗಿಸುತ್ತಿದ್ದ ಕುಟುಂಬಗಳು ಈಗ ಆಹಾರ ಭದ್ರತೆಯ ಕೊರತೆಯಿಂದ ಬಳಲುತ್ತಿವೆ. ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಪಡಿತರ ವಸ್ತುಗಳ ನಷ್ಟವು ಅವರ ಬದುಕಿನ ಹಾದಿಯನ್ನೇ ಬದಲಿಸಿದೆ. ಈ ಕ್ರಮವು ಕೇವಲ ಅಂಕೋಲಾದಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಚಾರಣೆ ಇಲ್ಲದೆ ಕ್ರಮ – ಕಾನೂನು ಉಲ್ಲಂಘನೆ ?

ಕಾನೂನಾತ್ಮಕವಾಗಿ, ಯಾವುದೇ ನಾಗರಿಕನ ಹಕ್ಕಿಗೆ ಧಕ್ಕೆ ಉಂಟುಮಾಡುವ ಮುನ್ನ ಆ ವ್ಯಕ್ತಿಗೆ ವಿಚಾರಣೆಯ ಅವಕಾಶ (Opportunity of being heard) ನೀಡುವುದು ಆಡಳಿತದ ಕಡ್ಡಾಯ ಕರ್ತವ್ಯವಾಗಿದೆ. ಆದರೆ ಪ್ರಸ್ತುತ ಅಂಕೋಲಾದಲ್ಲಿ ಪಡಿತರ ಚೀಟಿಗಳನ್ನು ಆನ್ಲೈನ್ ಮೂಲಕ ನೇರವಾಗಿ ಬಿಪಿಎಲ್ ಇಂದ ಎಪಿಎಲ್ ಗೆ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು “ಪ್ರಕೃತಿಯ ನ್ಯಾಯದ ತತ್ವ” (Principles of Natural Justice) ಉಲ್ಲಂಘನೆಯಾಗಿದ್ದು, ಆಡಳಿತಾತ್ಮಕ ನ್ಯಾಯಪ್ರಕ್ರಿಯೆಗೂ ವಿರುದ್ಧವಾಗಿದೆ ಎಂದು ಸಾಮಾಜಿಕ ವಲಯಗಳು ಆರೋಪಿಸುತ್ತಿವೆ.

ಸಾಮಾಜಿಕ ಕಾರ್ಯಕರ್ತ ಸುಭಾಷ್ ನಾಯ್ಕ್ ಈ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಾ, “ಜನರ ಬದುಕು ಕಾಗದದ ದಾಖಲೆಗಳ ಆಧಾರದಲ್ಲಿ ತೀರ್ಮಾನಿಸಲಾಗುತ್ತಿದೆ. ವಿಚಾರಣೆ ನೀಡದೇ ಪಡಿತರ ಹಕ್ಕು ಕಿತ್ತುಕೊಳ್ಳುವುದು ಅಸಂವಿಧಾನಿಕ ಕ್ರಮವಾಗಿದೆ. ಸರ್ಕಾರ ತಕ್ಷಣ ತಿದ್ದುಪಡಿ ಮಾಡಿ ನೈಜ ಬಡವರ ಪರ ನಿಲ್ಲಬೇಕು” ಎಂದು ಆಗ್ರಹಿಸಿದರು.

ಆದರೆ ಅಂಕೋಲಾ ತಾಲೂಕು ಆಹಾರ ನಿರೀಕ್ಷಕರು ಈ ಕುರಿತು ಸಮರ್ಥನೆ ನೀಡುತ್ತಾ, “ಮೇಲಧಿಕಾರಿಗಳಿಂದ ಬಂದ ಸರ್ಕಾರಿ ನಿರ್ದೇಶನದಂತೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ದಾಖಲೆ ಪರಿಶೀಲನೆಯ ಬಳಿಕ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಜನರ ಬೇಡಿಕೆ ಸ್ಪಷ್ಟವಾಗಿದೆ — ಆದಾಯ ಮಿತಿಯನ್ನು ಕಾಲೋಚಿತವಾಗಿ ಪರಿಷ್ಕರಿಸಿ, ವಿಚಾರಣೆಯ ಹಕ್ಕು ನೀಡುವ ವ್ಯವಸ್ಥೆ ಮಾಡಬೇಕು. ಬಿಪಿಎಲ್ ಪಡಿತರ ಚೀಟಿಯು ಕೇವಲ ದಾಖಲೆ ಅಲ್ಲ — ಅದು ಬಡವರ ಜೀವಾಳ. ಆಡಳಿತ ಕಾಗದದ ಅಂಕೆ-ಅಂಶಗಳಿಗಿಂತ ಜನರ ನೈಜ ಜೀವನವನ್ನು ಗಮನಿಸಬೇಕೆಂಬ ಒತ್ತಾಯ ದಿನೇದಿನೇ ಹೆಚ್ಚುತ್ತಿದೆ.

Share This Article