ಅಂಕೋಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕನ ಲೈಂಗಿಕ ಕಿರುಕುಳ ಆರೋಪ — ಪೋಷಕರು, ಮೀನುಗಾರ ಮುಖಂಡರಿಂದ ಮುತ್ತಿಗೆ..

News Desk
2 Min Read

ಅಂಕೋಲಾ ತಾಲೂಕಿನ ಪೂಜಗೇರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅನಾಚಾರ ವರ್ತನೆ ತೋರಿದ ಘಟನೆ ಬೆಳಕಿಗೆ ಬಂದು ತಾಲೂಕಿನ ಶಿಕ್ಷಣ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಲೇಜಿನ ಕಂಪ್ಯೂಟರ್ ವಿಷಯದ ಉಪನ್ಯಾಸಕನಾಗಿರುವ ರಾಮಚಂದ್ರ ಅಂಕೋಲೆಕರ ಆರೋಪಿತನು ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿನಿಯೊಂದಿಗೆ ಆಪ್ತತೆ ಬೆಳೆಸಿ ವಾಟ್ಸಪ್ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದನೆಂಬ ಮಾಹಿತಿ ದೊರೆತಿದೆ. ವಿದ್ಯಾರ್ಥಿನಿಯು ಈ ವರ್ತನೆಯನ್ನು ನಿರಾಕರಿಸಿದರೂ, ಆರೋಪಿ ಪಾಠ ಸಮಯದಲ್ಲಿಯೂ ಮತ್ತು ಕಾಲೇಜಿನ ಎನ್‌ಸಿಸಿ ಕೊಠಡಿಯಲ್ಲಿಯೂ ಅಸಭ್ಯವಾಗಿ ವರ್ತಿಸುತ್ತಿದ್ದನೆಂದು ತಿಳಿದುಬಂದಿದೆ.

ಜೂನ್ 2025ರಿಂದ ಆರಂಭವಾದ ಕಿರುಕುಳ ಸೆಪ್ಟೆಂಬರ್‌ನಲ್ಲಿ ತೀವ್ರಗೊಂಡಿದ್ದು, ಶಿರಶಿಯ ಕಾಲೇಜು ಪ್ರವಾಸದ ವೇಳೆ ಆರೋಪಿ ವಿದ್ಯಾರ್ಥಿನಿಯತ್ತ ಅಸಭ್ಯ ವರ್ತನೆ ತೋರಿದನೆಂಬ ಗಂಭೀರ ಆರೋಪವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿಯು ಕೊನೆಗೂ ತನ್ನ ಪೋಷಕರೊಂದಿಗೆ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಅಕ್ಟೋಬರ್ 27ರಂದು ಲಿಖಿತ ದೂರು ಸಲ್ಲಿಸಿದರು. ದೂರು ಆಧರಿಸಿ ಪೊಲೀಸರು ಅಪರಾಧ ಸಂಖ್ಯೆ 0196/2025 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿತನ ವಿರುದ್ಧ ಭಾರತೀಯ ನ್ಯಾಯ ಸಹಿತ ಕಾಯ್ದೆಯ (BNS) ವಿಧಿಗಳು 351(2), 74, 75(1), 75(2), 78(2) ಮತ್ತು 79ರಡಿ ತನಿಖೆ ಪ್ರಾರಂಭಿಸಿದರು.

ಘಟನೆಯು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟುಮಾಡಿದ್ದು, ಅಕ್ಟೋಬರ್ 28ರ ಬೆಳಗ್ಗೆ ಅಂಕೋಲಾ ಮತ್ತು ಸುತ್ತಮುತ್ತಲಿನ ಮೀನುಗಾರ ಸಮುದಾಯದ ಮುಖಂಡರು ಹಾಗೂ ವಿದ್ಯಾರ್ಥಿನಿಯ ಪೋಷಕರು ಕಾಲೇಜು ಆವರಣದ ಹೊರಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಆರೋಪಿತ ಉಪನ್ಯಾಸಕನ ತಕ್ಷಣದ ಬಂಧನ ಮತ್ತು ಅಮಾನತು ಕ್ರಮದ ಬೇಡಿಕೆಯನ್ನು ಮುಂದಿಟ್ಟುಕೊಂಡು ಘೋಷಣೆಗಳನ್ನು ಕೂಗಿದರು. ಅವರು ಕಾಲೇಜು ಪ್ರಾಂಶುಪಾಲರ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಪ್ರಾಂಶುಪಾಲರು ಘಟನೆಯ ತೀವ್ರತೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಆರೋಪವನ್ನೂ ಹೊರಹಾಕಿದರು. ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.

ಕಾಲೇಜು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಮಂಜೇಶ್ವರ್ ನಾಯಕ್ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಅವರು “ಘಟನೆ ಅತ್ಯಂತ ಗಂಭೀರವಾದದ್ದು; ಆಡಳಿತ ಮಂಡಳಿಯ ಸಭೆಯಲ್ಲಿ ವಿಷಯ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಇದೇ ದಿನ ಮಧ್ಯಾಹ್ನ ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿನಿಯ ಪೋಷಕರು ಅಂಕೋಲಾ ತಹಶೀಲ್ದಾರರಿಗೆ ಅಧಿಕೃತ ಮನವಿ ಸಲ್ಲಿಸಿದರು. ಮನವಿಯಲ್ಲಿ ಆರೋಪಿತ ಉಪನ್ಯಾಸಕನನ್ನು ತಕ್ಷಣ ಅಮಾನತುಗೊಳಿಸಿ ವಿದ್ಯಾರ್ಥಿನಿಗೆ ನ್ಯಾಯ ದೊರಕುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಜೊತೆಗೆ, ಪ್ರಾಂಶುಪಾಲರು ಘಟನೆಯನ್ನು ನಿರ್ಲಕ್ಷ್ಯ ಮಾಡಿದರೆಂಬ ಕಾರಣದಿಂದ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಬೇಡಿಕೆ ಇಡಲಾಗಿದೆ. ಮನವಿಯ ಪ್ರತಿಗಳನ್ನು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ.

ಈ ಘಟನೆಯು ಶಿಕ್ಷಣ ಕ್ಷೇತ್ರದ ಪವಿತ್ರತೆಯ ಬಗ್ಗೆ ಮತ್ತೆ ಪ್ರಶ್ನೆ ಎತ್ತಿದೆ. ಶಿಕ್ಷಕನು ಕೇವಲ ಪಾಠ ಹೇಳುವವನೇ ಅಲ್ಲ; ಆತ ನೈತಿಕತೆಯ ಪ್ರತಿಕ. ವಿದ್ಯಾರ್ಥಿನಿಯ ಗೌರವ ಮತ್ತು ಭದ್ರತೆ ರಕ್ಷಿಸುವುದು ಶಿಕ್ಷಕನ ಪ್ರಥಮ ಕರ್ತವ್ಯ. ಆದರೆ ಗುರುಗಳೇ ಮಿತಿ ಮೀರಿ ವರ್ತಿಸಿದರೆ, ಅದು ಸಮಾಜದ ನಂಬಿಕೆಗೆ ಹೊಡೆತ ನೀಡುತ್ತದೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಕಟ್ಟುನಿಟ್ಟಿನ ನೀತಿಗಳು ಮತ್ತು ನೈತಿಕ ನಿಯಮಗಳನ್ನು ಅನುಸರಿಸಬೇಕು. “ಗುರುವಿನ ಗೌರವ ಉಳಿಯಬೇಕಾದರೆ, ಗುರುವೇ ಗೌರವಕ್ಕೆ ಅರ್ಹನಾಗಿರಬೇಕು” ಎಂಬ ನುಡಿ ಇಲ್ಲಿ ನೆನಪಾಗುತ್ತದೆ.

Share This Article