ಅಂಕೋಲಾ-ಮಂಜುಗುಣಿ ರಸ್ತೆ: ಪೂಜಗೇರಿ ಬಳಿ ಗುಂಡಿಗಳ ಸಾಮ್ರಾಜ್ಯ, ಅಪಾಯದಲ್ಲಿ ಸಾರ್ವಜನಿಕರ ಸಂಚಾರ.!

News Desk
1 Min Read

ಅಂಕೋಲಾ : ಅಂಕೋಲಾದಿಂದ ಮಂಜುಗುಣಿ ಸಂಪರ್ಕಿಸುವ ರಸ್ತೆಯು ಪೂಜಗೇರಿ ಗ್ರಾಮದ ಬಳಿ ತೀವ್ರವಾಗಿ ಹದಗೆಟ್ಟಿದ್ದು, ಸಂಪೂರ್ಣ ಗುಂಡಿಮಯ ವಾಗಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ತಿಂಗಳಿಂದ ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಮಳೆಗಾಲದಲ್ಲಿ ಗುಂಡಿಗಳು ನೀರಿನಿಂದ ತುಂಬಿ, ಆಳ ಅರಿಯದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹರಸಾಹಸ ಪಡುತ್ತಿದ್ದು, ಹಲವು ಬಾರಿ ಬಿದ್ದು ಗಾಯಗೊಂಡ ಘಟನೆಗಳೂ ವರದಿಯಾಗಿವೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಈ ರಸ್ತೆ ಮಂಜುಗುಣಿ, ಹೊನ್ನೆಬೈಲ್ ಗೋಕರ್ಣ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೃಷಿಕರು ಹಾಗೂ ಸಾರ್ವಜನಿಕರು ಪ್ರತಿದಿನ ಈ ರಸ್ತೆಯನ್ನು ಬಳಸುತ್ತಾರೆ. ಹದಗೆಟ್ಟ ರಸ್ತೆಯಿಂದಾಗಿ ಸಾರಿಗೆ ವ್ಯವಸ್ಥೆಗೂ ತೊಂದರೆಯಾಗುತ್ತಿದ್ದು, ಬಸ್‌ಗಳು ಹಾಗೂ ಇತರೆ ವಾಹನಗಳ ಸಂಚಾರ ನಿಧಾನವಾಗಿದೆ.

ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖೆ ಈ ರಸ್ತೆಯ ದುರಸ್ತಿಗೆ ಮುಂದಾಗಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಘಾತ ವಾಗುವುದರಲ್ಲಿ ಯಾವುದೆ ಸಂದೇಹವಿಲ್ಲ..

Share This Article
Leave a Comment