ಅಂಕೋಲಾ: ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಹಾಡಹಗಲೇ ನಡೆದ ಮಾರಣಾಂತಿಕ ದಾಳಿಯನ್ನು ಅಂಕೋಲಾ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿನಂದನ್ ಖಾರ್ವಿ ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ, ಆರೋಪಿಗಳ ಬಂಧನದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿರುವ ಅವರು, ಭವಿಷ್ಯದಲ್ಲಿ ಅಂಕೋಲಾದಲ್ಲಿ ಇಂತಹ ಭಯದ ವಾತಾವರಣ ಮರುಕಳಿಸದಂತೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ದುಷ್ಕರ್ಮಿಗಳು ಗೋಪಾಲಕೃಷ್ಣ ಅವರಿಗೆ ಚಾಕುವಿನಿಂದ ಇರಿಯುತ್ತಿರುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಾಳಿಯ ತೀವ್ರತೆಯನ್ನು ಸ್ಪಷ್ಟಪಡಿಸಿದೆ. ಗಾಯಾಳು ಗೋಪಾಲಕೃಷ್ಣ ನಾಯಕ್ ಅವರು ಇದೀಗ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ತಮ್ಮ ನಾಯಕನ ಬಗ್ಗೆ ಮಾತನಾಡಿದ ಅಭಿನಂದನ್ ಖಾರ್ವಿ, “ಗೋಪಾಲಕೃಷ್ಣ ನಾಯಕ್ ಅವರು ಕೇವಲ ಒಬ್ಬ ರಾಜಕೀಯ ಮುಖಂಡರಲ್ಲ, ಅವರು ಸದಾ ಜನರ ಕಷ್ಟಗಳಿಗೆ ಮಿಡಿಯುವ ಜೀವ. ಯಾರಿಗೇ ಆಪತ್ತು ಬಂದರೂ ಸಹಾಯಕ್ಕೆ ನಿಲ್ಲುವಂತಹ ಅಪರೂಪದ ವ್ಯಕ್ತಿತ್ವ ಅವರದ್ದು. ಅವರ ಮೇಲೆ ನಡೆದಿರುವ ಈ ಭೀಕರ ಹಲ್ಲೆ ಅತ್ಯಂತ ಖಂಡನೀಯ. ಅವರು ಆದಷ್ಟು ಬೇಗ ಗುಣಮುಖರಾಗಿ ಮತ್ತೆ ನಮ್ಮೆಲ್ಲರೊಡನೆ ಸೇರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ನುಡಿದರು.
ಘಟನೆ ನಡೆದ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸ್ ಇಲಾಖೆ, ಗೋವಾಕ್ಕೆ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಗಡಿಭಾಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿನಂದನ್ ಖಾರ್ವಿ, “ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಅಂಕೋಲಾ ಪೊಲೀಸ್ ಇಲಾಖೆ ಈಗಾಗಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಡಹಗಲೇ ನಡೆದ ಈ ಘಟನೆಯ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ” ಎಂದು ಪ್ರಶಂಸಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, “ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರ ಬಹುದಾದ ಇನ್ನುಳಿದ ಎಲ್ಲಾ ಅಪರಾಧಿಗಳನ್ನು ಸಹ ಶೀಘ್ರವೇ ಬಂಧಿಸಬೇಕು. ಅಂಕೋಲಾ ಮೂಲತಃ ಒಂದು ಶಾಂತಿಯುತ ತಾಲೂಕು. ಹಾಡಹಗಲೇ ಸಾರ್ವಜನಿಕ ನಾಯಕರೊಬ್ಬರ ಮೇಲೆ ನಡೆದಿರುವ ಈ ಭೀಕರ ದಾಳಿಯಿಂದ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ. ಇನ್ನು ಮುಂದೆ ಅಂಕೋಲಾದಲ್ಲಿ ಇಂತಹ ಯಾವುದೇ ಭಯದ ವಾತಾವರಣ ಇರಬಾರದು. ಅದಕ್ಕಾಗಿ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗಲು ಯಾರೂ ಧೈರ್ಯ ಮಾಡದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸಂದೇಶ ರವಾನಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ವಿಕಾಸ ವಾಹಿನಿ ವರದಿ

