ಕಾರವಾರ: ನಗರದ ಬಿಲ್ಟ್ ಸರ್ಕಲ್ ಬಳಿ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ನೀಡುವ ಆಸೆ ತೋರಿಸಿ ಓಸಿ ಮಟ್ಕಾ ನಡೆಸುತ್ತಿದ್ದ ಅಡ್ಡೆಯ ಮೇಲೆ ಕಾರವಾರ ಶಹರ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಸದಾಶಿವಗಡದ ಪಿ. ಮೈದಾನದ ಹತ್ತಿರದ ನಿವಾಸಿ, 22 ವರ್ಷದ ಧರ್ಮ ಯಲ್ಲಪ್ಪ ಸ್ವಾಮಿ ಎಂದು ಗುರುತಿಸಲಾಗಿದೆ.
ದಿನಾಂಕ 24-03-2026 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ ಪಕ್ಕದಲ್ಲಿ ಆರೋಪಿಯು ಸಾರ್ವಜನಿಕರಿಂದ ಹಣ ಪಡೆದು ಅಂಕಿ-ಸಂಖ್ಯೆಗಳ ಮೇಲೆ ಪಂಥ ಕಟ್ಟುತ್ತಿದ್ದನು. ಖಚಿತ ಮಾಹಿತಿಯ ಮೇರೆಗೆ ಕಾರವಾರ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಉದ್ದಪ್ಪ ಧರೆಪ್ಪನವರ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಸ್ಥಳದಲ್ಲಿ ಆರೋಪಿಯಿಂದ 1,020 ರೂ. ನಗದು, ಅಂಕಿ-ಸಂಖ್ಯೆ ಬರೆದ ಚೀಟಿ, ಖಾಲಿ ಕಾಗದ ಹಾಗೂ ಒಂದು ಬಾಲ್ ಪೆನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕಾರವಾರ ಟೌನ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 78 (III) ಅಡಿಯಲ್ಲಿ ಪ್ರಕರಣ (ಕ್ರೈಂ ನಂ: 0033/2026) ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿಕಾಸ ವಾಹಿನಿ ವರದಿ

