ಅಂಕೋಲಾ: ತಾಲೂಕಿನ ಗಡಿಭಾಗದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತದಲ್ಲಿ ಸೋಮವಾರ ಮೋಜಿಗೆಂದು ಬಂದಿದ್ದ ಪ್ರವಾಸಿಗನೊಬ್ಬರು ನೀರಿನ ಆಳಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ, ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ತಮ್ಮ ಸಮಯಪ್ರಜ್ಞೆಯಿಂದ ಅವರನ್ನು ರಕ್ಷಿಸಿದ ಘಟನೆ ನಡೆದಿದೆ.
ತಮಿಳುನಾಡು ಮೂಲದ 19 ವರ್ಷದ ಆದಿತ್ಯೆ ಎಂಬುವವರೇ ಪ್ರಾಣಾಪಾಯದಿಂದ ಪಾರಾದ ಯುವಕ. ಇವರು ತಮಿಳುನಾಡಿನಿಂದ ಸುಮಾರು 40 ಜನರ ಪ್ರವಾಸಿಗರ ತಂಡದೊಂದಿಗೆ ಇಲ್ಲಿಗೆ ಆಗಮಿದ್ದರು. ಜಲಪಾತದ ವೀಕ್ಷಣೆ ವೇಳೆ ಉತ್ಸಾಹದಲ್ಲಿ ಸ್ನೇಹಿತರಿಗಿಂತ ಮುಂದೆ ಸಾಗಿದ ಆದಿತ್ಯೆ , ನೀರಿನ ಆಳದ ಅರಿವಿಲ್ಲದೆ ಇಳಿದಿದ್ದು, ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ.

ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ತಕ್ಷಣವೇ ಗಮನಿಸಿದ ಜೀವರಕ್ಷಕ ಸಿಬ್ಬಂದಿ ವಿಜಯಕುಮಾರ ನಾಯಕ್ ಅವರು, ಕ್ಷಣಮಾತ್ರವೂ ತಡಮಾಡದೇ ತಮ್ಮಲ್ಲಿದ್ದ ಹಗ್ಗವನ್ನು ನೀರಿನತ್ತ ಎಸೆದಿದ್ದಾರೆ. ಹಗ್ಗದ ಸಹಾಯದಿಂದ ಆದಿತ್ಯೆ ಅವರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸುವಲ್ಲಿ ವಿಜಯಕುಮಾರ್ ಯಶಸ್ವಿಯಾಗಿದ್ದು, ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸಕಾಲದಲ್ಲಿ ಸ್ಪಂದಿಸಿ ಯುವಕನ ಪ್ರಾಣ ಉಳಿಸಿದ ಸಿಬ್ಬಂದಿ ವಿಜಯಕುಮಾರ್ ಅವರ ಕಾರ್ಯಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

