ಅಂಕೋಲಾ: ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ಹಾಡಹಗಲೇ ದುಷ್ಕರ್ಮಿಗಳು ಏಕಾಏಕಿ ಎರಗಿ ಮಾರಣಾಂತಿಕ ದಾಳಿ ನಡೆಸುತ್ತಿರುವ ಭೀಕರ ವಿಡಿಯೋ ದೃಶ್ಯಾವಳಿಗಳು ಇದೀಗ ವೈರಲ್ ಆಗಿದೆ. ಕೃತ್ಯವೆಸಗಿದ ಆರೋಪಿಗಳ ಪೈಕಿ ನಾಲ್ಕು ಜನರನ್ನು ಈಗಾಗಲೇ ಬಂಧಿಸಿರುವ ಪೊಲೀಸರು, ಈ ದಾಳಿಯ ಹಿಂದಿರುವ ಅಸಲಿ ರೂವಾರಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ದುಷ್ಕರ್ಮಿಗಳು ಅನಿರೀಕ್ಷಿತವಾಗಿ ಬಂದು ದಾಳಿ ಮಾಡುತ್ತಿರುವ ಸಂಪೂರ್ಣ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಮಾರಣಾಂತಿಕ ದಾಳಿಯಿಂದಾಗಿ ಗಾಯಗೊಂಡಿರುವ ಗೋಪಾಲಕೃಷ್ಣ ನಾಯಕ ಅವರಿಗೆ ತುರ್ತು ಪ್ರಾಥಮಿಕ ಚಿಕಿತ್ಸೆಯ ಬಳಿಕ, ಇದೀಗ ಹೆಚ್ಚಿನ ಹಾಗೂ ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಚುರುಕಾಗಿರುವ ಪೊಲೀಸ್ ತಂಡ, ಇದೀಗ ಲಭ್ಯವಾಗಿರುವ ನೇರ ದಾಳಿಯ ವಿಡಿಯೋ ಹಾಗೂ ಬಂಧಿತರ ಹೇಳಿಕೆಗಳ ಆಧಾರದ ಮೇಲೆ ಈ ಭೀಕರ ದಾಳಿಗೆ ಅಸಲಿ ಕಾರಣವೇನು? ಎಂಬುದನ್ನು ಬೇಧಿಸಲು ಪೊಲೀಸರು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಿಕಾಸ ವಾಹಿನಿ ವರದಿ

