“ಸತ್ಯ ಹೇಳಿದರೆ ದೂರು ಕೊಡ್ತೀರಾ? ಇದು ಕಾನೂನಿಗೂ ಪ್ರಜಾಪ್ರಭುತ್ವಕ್ಕೂ ಅವಮಾನ!” — ಸಂಜೀವ ನಾಯ್ಕ ಖಡಕ್ ಪ್ರತಿಕ್ರಿಯೆ..

News Desk
3 Min Read

ಅಂಕೋಲಾ, ಅ.25: ಅಂಕೋಲಾ ಪುರಸಭೆಯ ಕೆಲ ಜನಪ್ರತಿನಿಧಿಗಳು ತನ್ನ ವಿರುದ್ಧ ನಿನ್ನೆ ದಿನಾಂಕ 24-10-2025 ರಂದು ಮನವಿ ಸಲ್ಲಿಸಿರುವ ಬಗ್ಗೆ ಸಾಮಾಜಿಕ ಹೋರಾಟಗಾರ ಸಂಜೀವ ಪಾಂಡುರಂಗ ನಾಯ್ಕ (ಕೋಟೆವಾಡ) ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ನೀಡಿದ ಹೇಳಿಕೆ ಹೀಗಿದೆ —“ಅಂಕೋಲಾ ಪುರಸಭೆಯ ಕೆಲ ಜನಪ್ರತಿನಿಧಿಗಳು ನನ್ನ ವಿರುದ್ಧ ತಹಶೀಲ್ದಾರರಿಗೆ ನೀಡಿರುವ ಮನವಿ ನೋವು ತರಿಸುವಂತದ್ದು ಮಾತ್ರವಲ್ಲ, ಸತ್ಯವನ್ನೇ ಮುಚ್ಚಿಹಾಕುವ ರಾಜಕೀಯ ಪ್ರಯತ್ನವಾಗಿದೆ. ನಾನು ಯಾವುದೇ ಸದಸ್ಯರ ವಿರುದ್ಧ ವೈಯಕ್ತಿಕ ದ್ವೇಷದಿಂದ ಮಾತಾಡಿಲ್ಲ. ನನ್ನ ಮಾತು ಸಂಪೂರ್ಣ ಕಾನೂನಿನ ಆಧಾರದ ಮೇಲೆ, ಸಾರ್ವಜನಿಕ ಹಿತಾಸಕ್ತಿಯಿಂದ ಮಾತ್ರ ಹೇಳಿದ್ದೇನೆ. ನಾನು ಯಾರನ್ನೂ ನಿಂದಿಸಿಲ್ಲ, ಸುಳ್ಳು ಮಾಹಿತಿ ನೀಡಿಲ್ಲ. ನಾನು ಕೇಳಿದ್ದೇನಂದ್ರೆ — ‘ಚುನಾಯಿತ ಸದಸ್ಯರ ಅವಧಿ ಮುಗಿದ ನಂತರ ಅವರು ಸಭೆ ನಡೆಸಿ ಠರಾವು ಕೈಗೊಳ್ಳಬಹುದೇ?’ ಎಂಬ ಕಾನೂನಾತ್ಮಕ ಸ್ಪಷ್ಟನೆ ಮಾತ್ರ. ಇದು ಯಾವ ರೀತಿಯ ಅಪರಾಧವೂ ಅಲ್ಲ. ಬದಲಿಗೆ ಇದು ಪ್ರಜಾಪ್ರಭುತ್ವದ ಹಕ್ಕು.”

“ನನ್ನ ವಿರುದ್ಧ ದೂರು ಕೊಡುವವರ ಉದ್ದೇಶ ಜನರ ಗಮನವನ್ನು ನಿಜ ವಿಷಯದಿಂದ ತಿರುಗಿಸುವುದು. ಅವರು ಸತ್ಯವನ್ನು ಒಪ್ಪಿಕೊಳ್ಳಲು ಹೆದರುತ್ತಿದ್ದಾರೆ. ಪುರಸಭೆಯ ಚುನಾಯಿತ ಮಂಡಳಿಯ ಅವಧಿ 12 ಅಕ್ಟೋಬರ್ 2025ರಂದು ಮುಗಿದಿದೆ ಎಂಬುದನ್ನು ರಾಜ್ಯ ಚುನಾವಣಾ ಆಯೋಗವೇ ಅಧಿಕೃತವಾಗಿ ಪ್ರಕಟಿಸಿದೆ. ಅದನ್ನು ನಾನು ಕೇವಲ ಉಲ್ಲೇಖಿಸಿದ್ದೇನೆ. ಹೀಗಿರುವಾಗ ‘ಸಂಜೀವ ನಾಯ್ಕ ತಪ್ಪು ಮಾಹಿತಿ ಕೊಟ್ಟಿದ್ದಾರೆ’ ಎನ್ನುವುದು ಅಸತ್ಯ, ಅರ್ಥಹೀನ ಆರೋಪ. ಕಾನೂನನ್ನು ಪ್ರಶ್ನಿಸುವವನು ಶತ್ರು ಅಲ್ಲ — ಸಾರ್ವಜನಿಕ ಹಿತದ್ರಷ್ಟಿಯಲ್ಲಿ ಎಚ್ಚರಿಕೆ ನೀಡುವವನು.”

“ಅವರು ಹೇಳುವಂತೆ ಹೈಕೋರ್ಟ್ ಆದೇಶದಿಂದ ಸದಸ್ಯರ ಅವಧಿ ವಿಸ್ತಾರವಾಗಿದೆ ಎಂಬುದು ಸಂಪೂರ್ಣ ಸುಳ್ಳು. ಹೈಕೋರ್ಟ್ ಕೇವಲ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ತಡೆ ನೀಡಿದೆ, ಆದರೆ ಅದು ಸದಸ್ಯರ ಅವಧಿ ವಿಸ್ತಾರ ಎಂದು ಎಲ್ಲಿಯೂ ಹೇಳಿಲ್ಲ. ಈ ಸತ್ಯವನ್ನು ಮರೆಯಲು ಕೆಲವರು ಕಾನೂನು ಪದಗಳನ್ನು ತಾವು ಬಯಸಿದಂತೆ ತಿರುಗಿಸುತ್ತಿದ್ದಾರೆ. ಇಂತಹ ತಪ್ಪು ವ್ಯಾಖ್ಯಾನಗಳು ಜನರನ್ನು ತಪ್ಪು ದಾರಿಗೆಳೆಯುತ್ತವೆ.”

“ಅವರು ನನ್ನ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಹೇಳುವುದು ನಗಣ್ಯ ಆರೋಪ. ನಾನು ಯಾವುದೇ ಸದಸ್ಯರ ವೈಯಕ್ತಿಕ ಜೀವನ ಅಥವಾ ಗೌರವದ ವಿರುದ್ಧ ಮಾತಾಡಿಲ್ಲ. ನನ್ನ ಪ್ರತಿಯೊಂದು ವಾಕ್ಯ ದಾಖಲೆ ಆಧಾರಿತ. ನನ್ನ ಮಾತುಗಳ ತೂಕ ಕಾನೂನಿನ ಪುಸ್ತಕದಲ್ಲಿ ಇದೆ. ನನ್ನ ಧ್ವನಿ ಸಾಮಾಜಿಕ ನ್ಯಾಯದ ಪರವಾಗಿದೆ. ಯಾರಿಗಾದರೂ ಅಸೌಕರ್ಯವಾದರೆ ಅದು ಅವರ ತಪ್ಪಿನ ಪ್ರತಿಫಲ.”

“ನಾನು ಪುರಸಭೆಯ ಯಾವುದೇ ಸದಸ್ಯರ ವಿರೋಧಿ ಅಲ್ಲ, ಆದರೆ ಕಾನೂನು ವಿರೋಧಿ ಕ್ರಮಗಳ ವಿರೋಧಿ. ಜನಪ್ರತಿನಿಧಿಗಳ ಅವಧಿ ಮುಗಿದ ಬಳಿಕ ಸಭೆ ನಡೆಸುವುದು ಕಾನೂನಾತ್ಮಕವಾಗಿ ಸರಿಯಲ್ಲ ಎಂದು ನಾನು ಹೇಳಿದ್ದೇನೆ. ಇದು ಕಾನೂನು ಪುಸ್ತಕದಲ್ಲೇ ಇದೆ. ಸದಸ್ಯರ ಅವಧಿ ಮುಗಿದ ಬಳಿಕ ಆಡಳಿತದ ಅಧಿಕಾರ ಮುಖ್ಯಾಧಿಕಾರಿಯವರಲ್ಲಿಯೇ ಇರುತ್ತದೆ. ಇದು ಪುರಸಭೆ ಕಾಯ್ದೆಯ ಧಾರಾ 48(1) ಸ್ಪಷ್ಟವಾಗಿ ಹೇಳುತ್ತದೆ. ಇದನ್ನು ನೆನಪಿಸುವುದೇ ನನ್ನ ತಪ್ಪಾ?”

“ನಾನು ಜನಪ್ರತಿನಿಧಿಗಳನ್ನು ಗೌರವಿಸುತ್ತೇನೆ. ಆದರೆ ಅವರು ಅಧಿಕಾರ ಕಳೆದುಕೊಂಡ ನಂತರವೂ ಕಚೇರಿಯಲ್ಲಿ ಕುಳಿತು ಅಧಿಕಾರದ ಚಾಯೆಯಲ್ಲಿ ಸಭೆ ನಡೆಸಿದರೆ — ಅದು ಕಾನೂನಿನ ಅವಮಾನ. ಅದನ್ನು ಕೇಳುವುದೇ ನನ್ನ ಕರ್ತವ್ಯ. ನಾನು ಸತ್ಯ ಹೇಳಿದ್ದೇನೆ, ಮುಂದೆಯೂ ಹೇಳುತ್ತೇನೆ. ಈ ರೀತಿಯ ಸುಳ್ಳು ದೂರಿನ ರಾಜಕೀಯ ಆಟಗಳು ನನ್ನ ಧೈರ್ಯವನ್ನು ಕುಗ್ಗಿಸಲಾರವು. ಕಾನೂನು ಪುಸ್ತಕ ನನ್ನ ಕೈಯಲ್ಲಿದೆ, ಸತ್ಯ ನನ್ನ ಪಕ್ಕದಲ್ಲಿದೆ.”

“ಪುರಸಭೆ ಸದಸ್ಯರು ನೀಡಿರುವ ಈ ಮನವಿ ಸರಕಾರೀ ಅಧಿಕಾರಿಗಳ ಸಮಯ ವ್ಯರ್ಥ ಮಾಡುವ ಅರ್ಥಹೀನ ಪ್ರಯತ್ನ. ಅವರು ನನ್ನ ವಿರುದ್ಧ ದೂರು ಕೊಡುವ ಬದಲು ಕಾನೂನು ಪುಸ್ತಕ ಓದಲಿ. ಅಧಿಕಾರ ಎಂದರೆ ಶಾಶ್ವತವಾದ ಹಕ್ಕು ಅಲ್ಲ — ಅದು ಜನರು ನೀಡಿದ ತಾತ್ಕಾಲಿಕ ಜವಾಬ್ದಾರಿ. ಅವಧಿ ಮುಗಿದ ಬಳಿಕ ಅದಕ್ಕೆ ತೆರೆ ಬೀಳುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವ.”

“ಇನ್ನೆಲ್ಲಾ ದಿನಗಳಲ್ಲಿ ಈ ರೀತಿಯ ಸುಳ್ಳು, ಅಸತ್ಯ, ರಾಜಕೀಯ ಉದ್ದೇಶದ ಮನವಿಗಳು ಪುರಸಭೆಯಿಂದ ಬಾರದೆ ಇರಲಿ ಎಂಬುದೇ ನನ್ನ ಆಶೆ. ನಾನೇ ಹೇಳಿದ್ದೇನೆ — ಪಾರದರ್ಶಕತೆ ಇರಲಿ, ಕಾನೂನು ಪಾಲನೆಯಿರಲಿ, ಜನರ ಮುಂದೆ ಸತ್ಯ ಬಯಲಾಗಲಿ. ಇದೇ ನನ್ನ ಹೋರಾಟದ ಅಸ್ತ್ರ, ಇದೇ ನನ್ನ ಧ್ಯೇಯ.”

ಸಂಜೀವ ಪಾಂಡುರಂಗ ನಾಯ್ಕ, ಕೋಟೆವಾಡ (ಅಂಕೋಲಾ)ಸಾಮಾಜಿಕ ಹೋರಾಟಗಾರ

Share This Article