ಅಂಕೋಲಾ:sep25.ಅಂಕೋಲಾ ತಾಲೂಕಿನ ಕೋಟೇವಾಡ ಮುಕ್ತಿಧಾಮದ ಹತ್ತಿರ ವಿದ್ಯುತ್ ತಂತಿಯ ಮೇಲೆ ಮರದ ದೊಡ್ಡ ಕೊಂಬೆ ಅಪಾಯಕರ ರೀತಿಯಲ್ಲಿ ವಾಲಿದೆ. ಗಾಳಿ ಬೀಸಿದರೆ ಯಾವಾಗ ಬೇಕಾದರೂ ಕೊಂಬೆ ಕೆಳಗೆ ಬಿದ್ದು ತಂತಿ ತುಂಡಾಗುವ ಸಾಧ್ಯತೆ ಇದ್ದು, ಸ್ಥಳೀಯರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಸದರಿ ರಸ್ತೆಯಿಂದ ಪ್ರತಿದಿನ ಮಕ್ಕಳು, ಹಿರಿಯರು ಹಾಗೂ ಪಾದಚಾರಿಗಳು ಸಂಚರಿಸುತ್ತಾರೆ. ಕೊಂಬೆ ತಂತಿಯ ಮೇಲೆ ಬಿದ್ದರೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅನಾಹುತ ಸಂಭವಿಸಬಹುದು. ತಂತಿ ತುಂಡಾಗಿ ನೆಲಕ್ಕೆ ಬಿದ್ದರೆ ಮನುಷ್ಯರ ಜೀವಕ್ಕೂ ಅಪಾಯ ಎದುರಾಗುವ ಭೀತಿ ಇದೆ.
ಈ ಹಿನ್ನೆಲೆ ತಕ್ಷಣವೇ ಅಂಕೋಲಾ ಪುರಸಭೆ ಹಾಗೂ ಹೆಸ್ಕಾಂ ಇಲಾಖೆ ಜಂಟಿಯಾಗಿ ಬಂದು ಮರದ ಕೊಂಬೆಯನ್ನು ಕತ್ತರಿಸಿ ಅಪಾಯ ನಿವಾರಣೆ ಮಾಡಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ವರದಿ: ಕಿರಣ ಗಾಂವಕರ

