ಅಂಕೋಲಾ: ಅಂಕೋಲಾ ಬಸ್ ನಿಲ್ದಾಣದಲ್ಲಿ ಕುಮಟಾ ಮಾರ್ಗದ ಬಸ್ ಅವ್ಯವಸ್ಥೆಯಿಂದ ಪ್ರತಿದಿನ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರಾದ ಮೀನಾಕ್ಷಿ ನಾಯ್ಕ್ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಅವರು ವಿಕಾಸ ವಾಹಿನಿ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಹೇಳಿದರು
“ಪ್ರತಿದಿನ ಅಂಕೋಲಾದಿಂದ ಕುಮಟಾಕ್ಕೆ ಉದ್ಯೋಗಕ್ಕೆ, ಕಾಲೇಜಿಗೆ, ಆಸ್ಪತ್ರೆಗಳಿಗೆ ನೂರಾರು ಜನ ಹೊರಡುತ್ತಾರೆ. ಎಲ್ಲರೂ ಸರಕಾರಿ ಬಸ್ ಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ಇತ್ತೀಚೆಗೆ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸರಿಯಾದ ಬಸ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಬೆಳಿಗ್ಗೆ 9 ಗಂಟೆಗೆ ಬಸ್ ನಿಲ್ದಾಣದಲ್ಲಿ ನಿಂತರೂ 10.30ರವರೆಗೂ ಬಸ್ ಬರುವುದೇ ಇಲ್ಲ. ನೂರಾರು ಜನರು ಜಮಾ ಆದರೂ ಬದಲಿ ಬಸ್ ಬಿಡುವ ವ್ಯವಸ್ಥೆ ಸಹ ಮಾಡುವುದಿಲ್ಲ. ವಿಚಾರಿಸಿದರೆ ಹುಬ್ಬಳ್ಳಿ–ಧರ್ಮಸ್ಥಳ ಬಸ್ ಬರುತ್ತದೆ, ಚಿಕ್ಕಮಗಳೂರು ಬಸ್ ಬರುತ್ತದೆ ಎಂಬ ಹಾರಿಕೆ ಉತ್ತರ ಕೊಟ್ಟು ಅಧಿಕಾರಿಗಳು ಸುಮ್ಮನಿರುತ್ತಾರೆ. ಹೀಗೆ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ತಾಲೂಕಿನ ಮುಖ್ಯ ಬಸ್ ನಿಲ್ದಾಣದಲ್ಲಿಯೇ ಈ ರೀತಿ ಸಮಸ್ಯೆ ಎದುರಾಗುತ್ತಿರುವಾಗ, ಹಳ್ಳಿ ಭಾಗಗಳಿಂದ ಬರುವವರ ಸ್ಥಿತಿ ಇನ್ನೆಷ್ಟು ಗಂಭೀರವಾಗಬಹುದು? ಆದಷ್ಟು ಬೇಗನೆ, ಅಂದರೆ ನಾಳೆಯಿಂದಲೇ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿದಿನ ಬಸ್ ಅವ್ಯವಸ್ಥೆಯಿಂದ ಒದ್ದಾಡುತ್ತಿರುವ ಸಾರ್ವಜನಿಕರು ಸೇರಿ ಹೋರಾಟ ನಡೆಸುವಂತಾಗುತ್ತದೆ” – ವಕೀಲ ಮೀನಾಕ್ಷಿ ನಾಯ್ಕ್ ಎಚ್ಚರಿಸಿದರು.

ಮೀನಾಕ್ಷಿ ನಾಯ್ಕ್ ಮೂಲತಃ ಅಂಕೋಲದವರು. ಅವರು ದಿನನಿತ್ಯ ಕುಮಟಾ–ಅಂಕೋಲಾ ಬಸ್ಸಿನಲ್ಲಿ ಪ್ರಯಾಣಿಸಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದಾರೆ. ಇದರ ಮೂಲಕ ಪ್ರಯಾಣಿಕರ ಸಂಕಷ್ಟವನ್ನು ನೇರವಾಗಿ ಗಮನಿಸುತ್ತಿದ್ದಾರೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಜವಾಬ್ದಾರಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರ ತೀವ್ರ ದ್ವನಿ ತೋರಿದ್ದಾರೆ. ಹೀಗಾಗಿ, ಬಸ್ ವ್ಯವಸ್ಥೆಯನ್ನು ತಕ್ಷಣ ಸರಿಪಡಿಸುವ ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ವರದಿ: ಕಿರಣ ಗಾಂವಕರ

