
ಅಂಕೋಲಾ : ಮೊನ್ನೆ ದಿನಾಂಕ 19-04-2025 ರಂದು ನಿಮ್ಮ ವಿಕಾಸ ವಾಹಿನಿಯಲ್ಲಿ ” ಮದುವೆ ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಪೂಜಗೇರಿ ಹಳ್ಳದ ಅಕ್ಕ ಪಕ್ಕ ಸುರಿದು ಬೆಂಕಿ ಹಾಕುತ್ತಿರುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಳ. ” ಎಂಬ ಶೀರ್ಷಿಕೆ ಅಡಿ ಸುದ್ದಿ ಬಿತ್ತರ ಮಾಡಿದ್ದು ಸದರಿ ಸುದ್ದಿಯಲ್ಲಿ ಜನವಸತಿ ಇಲ್ಲದೆ ಇರುವ ಪ್ರದೇಶದಲ್ಲಿ ಖಾಸಗಿಯವರ ಅಭಿವೃದ್ಧಿಗೋಸ್ಕರ ಸರ್ಕಾರದ ಅನುದಾನವನ್ನು ಬಳಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಕ್ರೀಟ ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡಿದ್ದು ಸದರಿ ರಸ್ತೆಯ ಲಾಭವನ್ನು ಪಡೆದುಕೊಂಡ ಕೆಲವು ಕಿಡಿಗೇಡಿಗಳು ಕಾಂಕ್ರೀಟ್ ರಸ್ತೆಯಿಂದ ಚಲಾಯಿಸಿಕೊಂಡು ಬಂದು ಲೋಡ್ ಗಟ್ಟಲೆ ಕಸವನ್ನು ಹಳ್ಳದ ಅಕ್ಕಪಕ್ಕ ತಂದು ಸುರಿದು ಪ್ರಕೃತಿ ನಾಶವನ್ನು ಮಾಡುತ್ತಿದ್ದಾರೆ. ಎಂದು ಕಾಂಕ್ರೀಟ್ ರಸ್ತೆಯ ಬಗ್ಗೆ ಇದೇ ಸುದ್ದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಕಾಂಕ್ರೀಟ್ ರಸ್ತೆಯನ್ನು ಕೆಂಪು ಮಣ್ಣಿನಿಂದ ಮುಚ್ಚಲು ಹೊರಟರೇ ರಿಯಲ್ ಎಸ್ಟೇಟ್ ಮಾಫಿಯಾಗಳು..?
ವಿಕಾಸ ವಾಹಿನಿಯಲ್ಲಿ ಸುದ್ದಿ ಮಾಡಿದಂತೆ ಹಳ್ಳದ ಅಕ್ಕಪಕ್ಕ ಸುರಿದಿರುವ ಕಸವನ್ನು ಸಂಬಂಧಪಟ್ಟವರು ವಿಲೇವಾರಿ ಮಾಡಲಾಗಿದೆಯೋ ಅಥವಾ ಇಲ್ಲ ಎಂದು ಸ್ಥಳ ಪರಿಶೀಲನೆಗೆ ಹೊರಟಾಗ ಅಚ್ಚರಿ ಕಾದಿತ್ತು. ಲ್ಯಾಂಡ್ ಆರ್ಮಿ ಇಂದ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಕಾಂಕ್ರೀಟ ರಸ್ತೆಯು ಕೆಂಪು ಮಣ್ಣಿನಿಂದ ಮುಚ್ಚಿ ಸಮತಟ್ಟಾಗಿ ಹೋಗಿತ್ತು.. ಈ ಬಗ್ಗೆ ವಂದಿಗೆ ಮತ್ತು ಶೆಟಗೇರಿ ಪಂಚಾಯತದ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ನಾಯಕ್ ರವರಿಗೆ ಮಾಹಿತಿ ನೀಡಲಾಗಿದ್ದು. ಸ್ಥಳಕ್ಕೆ ಕೂಡಲೇ ಬಂದ ಅಧಿಕಾರಿಗಳು ಸ್ಥಳದ ವೀಕ್ಷಣೆ ಮಾಡಿದರು. ಸದರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ ಪ್ರದೇಶವು ಬಬ್ರುವಾಡ ಪಂಚಾಯಿತಿಗೆ ಬರುತ್ತದೆ ಎಂದು ಖಚಿತಪಡಿಸಿದರು. ಸದರಿ ಕಾಂಕ್ರೀಟ್ ರಸ್ತೆಯಲ್ಲಿ ಕೆಂಪು ಮಣ್ಣು ಹಾಕಿ ಮುಚ್ಚಿರುವ ಕುರಿತು ಬೊಬ್ರುವಾಡ ಪಂಚಾಯಿತಿಗೆ ಯಾವುದೇ ಮಾಹಿತಿ ಇಲ್ಲದಂತೆ ತೋರುತ್ತದೆ.

ಜನವಸತಿ ಇಲ್ಲದೆ ಇರುವ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ಖಾಸಗಿ ಅವರ ಸೈಟುಗಳಿಗೆ ಲ್ಯಾಂಡ್ ಆರ್ಮಿ ಅವರು 200 ಮೀ ರಸ್ತೆ ನಿರ್ಮಾಣ ಮಾಡಿದ್ದು, ಸದ್ರಿ ರಸ್ತೆಗೆ ಬೇಡಿಕೆ ಇಟ್ಟವರು ಯಾರೂ? ಜನವಸತಿ ಇಲ್ಲದ ಪ್ರದೇಶಗಳಿಗೆ ಅಧಿಕಾರಿಗಳು ರಸ್ತೆಯನ್ನು ಮಂಜೂರು ಮಾಡಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ತಾಲೂಕಿನ ಅನೇಕ ಗ್ರಾಮ ಪಂಚಾಯತಿಯ ಜನವಸತಿ ಇರುವ ಪ್ರದೇಶದಲ್ಲಿ ಸರಿಯಾದ ರಸ್ತೆ ಸಂಪರ್ಕವೇ ಇಲ್ಲ. ಜನ ವಸತಿ ಪ್ರದೇಶದಲ್ಲಿ ಸಾಕಷ್ಟು ರಸ್ತೆಯ ಬೇಡಿಕೆ ಇದ್ದು .. ಅಂತಹ ಪ್ರದೇಶಗಳಲ್ಲಿ ರಸ್ತೆ ಮಾಡುವುದನ್ನು ಬಿಟ್ಟು ಜನವಸತಿ ಇಲ್ಲದೆ ಇರುವ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳ ಅಭಿವೃದ್ಧಿಗೋಸ್ಕರ ಸಿಆರಜೆಡ್ ವ್ಯಾಪ್ತಿಗೆ ಬರುವ ಹಳ್ಳದ ಪಕ್ಕ ಲಗತ್ತಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ, ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡವರ ಜೊತೆಗೆ ಕಾಂಕ್ರೀಟ್ ರಸ್ತೆಗೆ ಕೆಂಪು ಮಣ್ಣನು ಹಾಕಿ ಸಮತಟ್ಟಾಗಿ ಬರಾವು ಮಾಡಿದ ಕಿಡಿಗೇಡಿಗಳ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕಾನೂನು ರೀತಿಯಾಗಿ ಕ್ರಮ ಜರುಗಿಸುವರೇ ಎಂದು ಕಾದು ನೋಡಬೇಕಾಗಿದೆ….

