ಗೋಪಾಲಕೃಷ್ಣ ನಾಯಕ್ ಕೊಲೆ ಯತ್ನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಕಾರವಾರ-ಗೋವಾ ಗಡಿಯಲ್ಲಿ ನಾಲ್ವರು ಆರೋಪಿಗಳ ಸೆರೆ.?

News Desk
1 Min Read

ಅಂಕೋಲಾ: ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಅಂಕೋಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಹಾಡಹಗಲೇ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಗೋಪಾಲಕೃಷ್ಣ ನಾಯಕ್ ತಲೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ಕಾರವಾರ-ಗೋವಾ ಗಡಿಭಾಗದಲ್ಲಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಗಡಿ ದಾಟುವ ಮುನ್ನವೇ ಬಲೆಗೆ ಬಿದ್ದ ದುಷ್ಕರ್ಮಿಗಳು: ಘಟನೆ ನಡೆದ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸ್ ಇಲಾಖೆ, ಜಿಲ್ಲೆಯಾದ್ಯಂತ ಹೈ-ಅಲರ್ಟ್ ಘೋಷಿಸಿ, ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿತ್ತು. ಹಲ್ಲೆಕೋರರು ಗೋವಾ ನೋಂದಣಿಯ ಕಾರಿನಲ್ಲಿ ಬಂದಿದ್ದ ಸುಳಿವನ್ನಾಧರಿಸಿ ಶೋಧ ನಡೆಸುತ್ತಿದ್ದ ಪೊಲೀಸರ ಬಲೆಗೆ ಇದೀಗ ಕಾರವಾರ ಮತ್ತು ಗೋವಾ ಗಡಿಯ ಚೆಕ್‌ಪೋಸ್ಟ್ ಬಳಿ ನಾಲ್ವರು ಆರೋಪಿಗಳು ಬಿದ್ದಿದ್ದಾರೆ ಎನ್ನಲಾಗಿದೆ.

ಕೃತ್ಯವೆಸಗಿ ಗಡಿ ದಾಟಿ ನೆರೆಯ ರಾಜ್ಯಕ್ಕೆ ಪರಾರಿಯಾಗುವ ಅವರ ಯತ್ನವನ್ನು ಪೊಲೀಸರು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಗೋಪಾಲಕೃಷ್ಣ ನಾಯಕ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸದ್ಯ ಬಂಧಿತರ ಬಗ್ಗೆ ಪೊಲೀಸ್ ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಬಿದ್ದ ಬಳಿಕವಷ್ಟೇ ಆರೋಪಿಗಳ ಹಿನ್ನೆಲೆ ಹಾಗೂ ಕಾರ್ಯಾಚರಣೆಯ ಸಂಪೂರ್ಣ ಚಿತ್ರಣ ಇಡೀ ತಾಲೂಕಿನ ಜನತೆಗೆ ಲಭ್ಯವಾಗಲಿದೆ.

Share This Article
Leave a Comment