ಅಂಕೋಲಾದ ಈ ಅಭಿವೃದ್ಧಿಯಾದ ರಸ್ತೆಗೆ ಹಳೆಯ ಕಿರಿದಾದ ಸೇತುವೆಯೇ ಕಂಟಕ!.

News Desk
1 Min Read

ಅಂಕೋಲಾ: ತಾಲೂಕಿನ ಅಭಿವೃದ್ಧಿಗೊಂಡ ರಸ್ತೆಗಳ ಪೈಕಿ ಪ್ರಮುಖವಾದ ಪೂಜಗೇರಿ ರಸ್ತೆಯಲ್ಲಿರುವ ಹಳೆಯ ಕಿರಿದಾದ ಸೇತುವೆ ಇದೀಗ ಸಂಚಾರ ದಟ್ಟಣೆಗೆ ಕಾರಣ ವಾಗುತ್ತಿದೆ. ರಸ್ತೆ ಅಗಲೀಕರಣಗೊಂಡು ವಾಹನ ಸಂಚಾರ ಸುಗಮವಾಗಿದ್ದರೂ, ಮಧ್ಯದಲ್ಲಿರುವ ಈ ಸೇತುವೆ ಮಾತ್ರ ಹಳೆಯ ವಿನ್ಯಾಸದಲ್ಲೇ ಉಳಿದಿದೆ.

ಗಂಗಾವಳಿ ಸೇತುವೆ ಸಾರಿಗೆಗೆ ಮುಕ್ತವಾಗಿರುವುದರಿಂದ ಇದೇ ಮಾರ್ಗದ ಮೂಲಕ ಗೋಕರ್ಣ ಕಡೆಗೆ ತೆರಳುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರವಾಸಿಗರ ವಾಹನಗಳ ಜೊತೆಗೆ ಶಾಲಾ-ಕಾಲೇಜು ಬಸ್‌ಗಳು, ಸರಕಾರಿ ಮತ್ತು ಖಾಸಗಿ ಸಾರಿಗೆ ವಾಹನಗಳ ಓಡಾಟವೂ ಹೆಚ್ಚಳ ಕಂಡಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳ ವಾಹನ ಸಂಚಾರ ಜಾಸ್ತಿಯಾಗಿದ್ದು, ಕಿರಿದಾದ ಸೇತುವೆ ಬಳಿ ಟ್ರಾಫಿಕ್ ಜಾಮ್ ಸಾಮಾನ್ಯ ದೃಶ್ಯವಾಗಿದೆ. ಎರಡು ದಿಕ್ಕಿನಿಂದ ಒಂದೇ ವೇಳೆ ವಾಹನಗಳು ಬರುವಾಗ ಚಾಲಕರು ಪರಸ್ಪರ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇದರಿಂದ ಸಮಯ ನಷ್ಟವಾಗುವುದಲ್ಲದೆ, ಅಪಘಾತದ ಭೀತಿಯೂ ಹೆಚ್ಚುತ್ತಿದೆ. ಸಂಚಾರ ದಟ್ಟಣೆ ಹಾಗೂ ಅಪಘಾತ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೇತುವೆಯನ್ನು ಅಗಲೀಕರಿಸುವುದು ಅಥವಾ ಹೊಸ ಸೇತುವೆ ನಿರ್ಮಾಣ ಮಾಡುವುದೇ ಸೂಕ್ತ ಪರಿಹಾರ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪೂಜಗೇರಿ ರಸ್ತೆಯ ಸೇತುವೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This Article
Leave a Comment