ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ಸಂಭ್ರಮದ ನಡುವೆಯೇ, ಭಕ್ತರ ಭಕ್ತಿ ಹಾಗೂ ನಂಬಿಕೆಯನ್ನು ಬಂಡವಾಳ ವಾಗಿಸಿಕೊಂಡು ವಂಚಿಸಲು ಸೈಬರ್ ಖದೀಮರು ಹೊಸ ತಂತ್ರ ರೂಪಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿರುವ ವಂಚಕರು, ಆನ್‌ಲೈನ್ ಮೂಲಕ ದೇವಿಯ ‘ಉಡಿ ತುಂಬುವ ಸೇವೆ’ ಮಾಡಿಸುವುದಾಗಿ ನಂಬಿಸಿ ಹಣ ದೋಚಲು ಯತ್ನಿಸಿದ್ದು, ಈ ಬಗ್ಗೆ ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ವಂಚನೆ ಜಾಲ? ಸಾಮಾಜಿಕ ಜಾಲತಾಣಗಳಲ್ಲಿ “Yajmaan” (ಯಜಮಾನ) ಎಂಬ ಖಾತೆಯಿಂದ ಈ ನಕಲಿ ವಿಡಿಯೋ ಜಾಹೀರಾತನ್ನು ಹರಿಬಿಡಲಾಗಿದೆ. “ಫೆಬ್ರವರಿ 24 ರಿಂದ ಮನೆಯಲ್ಲಿಯೇ ಕುಳಿತು ಕೇವಲ 3517 ರೂ. ಪಾವತಿಸಿ ಯಜಮಾನ್ ಡಾಟ್ ಮೂಲಕ ದೇವಿಯ ವಿಶೇಷ ಸೀರೆ ಸೇವೆ ಮಾಡಿಸಬಹುದು. ವಿಧಿ-ವಿಧಾನಗಳೊಂದಿಗೆ ಸೇವೆ ಸಲ್ಲಿಸಿ, ಅದರ ವಿಡಿಯೋವನ್ನು ನಿಮಗೆ ಕಳುಹಿಸಲಾಗುವುದು. ಅಲ್ಲದೆ, ದೇವಿಯ ಪ್ರಸಾದ, ಕುಂಕುಮ, ಅರಿಶಿನ ಹಾಗೂ ಬ್ಲೌಸ್ ಪೀಸ್ ಅನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲಾಗುವುದು” ಎಂದು ಭಕ್ತರನ್ನು ಮರಳು ಮಾಡುವ ಪ್ರಯತ್ನ ಮಾಡಲಾಗಿದೆ.
“ಸಮಯ ಕಡಿಮೆ ಇದೆ, ಈಗಲೇ ಬುಕ್ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ” ಎಂಬ ಆಕರ್ಷಕ ಸಾಲುಗಳ ಮೂಲಕ ವಂಚನೆಯ ಬಲೆ ಬೀಸಲಾಗಿದೆ.

ದೇವಸ್ಥಾನ ಮಂಡಳಿ ಸ್ಪಷ್ಟನೆ ಮತ್ತು ಎಫ್ಐಆರ್ ದಾಖಲು:
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ದೇವಸ್ಥಾನದ ವತಿಯಿಂದಾಗಲಿ ಅಥವಾ ಆಡಳಿತ ಮಂಡಳಿಯಿಂದಾಗಲಿ ಜಾತ್ರೆಯ ನಿಮಿತ್ತ ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್ ಸೇವೆಗಳ ಬಗ್ಗೆ ಯಾವುದೇ ಜಾಹೀರಾತು ನೀಡಿಲ್ಲ, ಇದೊಂದು ಸಂಪೂರ್ಣ ಸುಳ್ಳು ಸುದ್ದಿ ಎಂದು ಖಚಿತಪಡಿಸಲಾಗಿದೆ.
ಭಕ್ತರನ್ನು ವಂಚಿಸುತ್ತಿರುವ ಈ ಜಾಲದ ಕುರಿತು ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ 66(ಸಿ)(ಡಿ) ಹಾಗೂ ಬಿಎನ್‌ಎಸ್ 318(4) ಅಡಿಯಲ್ಲಿ (ಗುನ್ನಾ ನಂ: 21/2026) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.
ಪೊಲೀಸರ ಖಡಕ್ ಎಚ್ಚರಿಕೆ: ಇದೊಂದು ಸಂಪೂರ್ಣ AI ನಿರ್ಮಿತ ನಕಲಿ ವಿಡಿಯೋ ಆಗಿದ್ದು, ಸಾರ್ವಜನಿಕರು ಹಾಗೂ ಭಕ್ತರು ಇಂತಹ ಸುಳ್ಳು ಮಾಹಿತಿಗೆ ಕಿವಿಗೊಡಬಾರದು, ಯಾವುದೇ ಲಿಂಕ್ ಕ್ಲಿಕ್ ಮಾಡಿ ಹಣ ಪಾವತಿಸಬಾರದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ. ಜೊತೆಗೆ, ಇಂತಹ ನಕಲಿ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಕಿಡಿಗೇಡಿಗಳ ವಿರುದ್ಧವೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ವರದಿ: ಸುಪ್ರಿಯಾ ವಿಷ್ಣು ನಾಯ್ಕ

