“ಕೇಣಿ ಬಂದರು ವಿರೋದ ಹೋರಾಟಕ್ಕೆ ನಾಳೆ ಒಂದು ವರ್ಷ: ನಾಳೆ ಕರಾಳ ದಿನಾಚರಣೆ–ಅಣಕು ಶವಯಾತ್ರೆಯೊಂದಿಗೆ ಅಂಕೋಲಾ ಬಂದ್ ಗೆ ಕರೆ, ಯೋಜನೆ ಕೈಬಿಡದಿದ್ದರೆ ಮುಂಬರುವ ಚುನಾವಣೆಯನ್ನೇ ಬಹಿಷ್ಕರಿಸುತ್ತೇವೆ ಎಂದ ಹೋರಾಟಗಾರರು..

News Desk
2 Min Read

ಅಂಕೋಲಾ: ಕೇಣಿ ವಾಣಿಜ್ಯ ಬಂದರು ಯೋಜನೆ ವಿರುದ್ಧ ಅಂಕೋಲಾದಲ್ಲಿ ಕಳೆದ 13 ದಿನಗಳಿಂದ ನಿರಂತರವಾಗಿ ಧರಣಿ–ಸತ್ಯಾಗ್ರಹ ನಡೆಯುತ್ತಿದ್ದು, ಇಂದು ಬಡಗೇರಿ, ಬಾವಿಕೇರಿ, ಮತ್ತು ಕೆಣಿ ,ಹೊನ್ನಿಕೆರಿ ಪ್ರದೇಶದ ಸಾರ್ವಜನಿಕರು ಈ ದಿನ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಈ ಹೋರಾಟಕ್ಕೆ ನಾಳೆ 25-11-2025 ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ, ಕರಾಳ ದಿನಾಚರಣೆ ಜೊತೆಗೆ ಅಂಕೋಲಾ ಬಂದ್ ಘೋಷಿಸಲಾಗಿದೆ. ಪರಿಸರಕ್ಕೆ ಮತ್ತು ಸ್ಥಳೀಯರ ಜೀವಕ್ಕೆ ಗಂಭೀರ ಅಪಾಯ ಉಂಟಾಗುವುದನ್ನು ತಿಳಿದಿದ್ದರೂ, ರಾಜ್ಯ ಸರ್ಕಾರ, ಉಸ್ತುವಾರಿ ಮಂತ್ರಿಗಳು, ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ಕೈ ಬಿಡುವ ಕುರಿತು ಯಾವುದೇ ಹೇಳಿಕೆ ನೀಡದೆ ಮೌನವಾಗಿರುವುದರಿಂದ ಜನರಲ್ಲಿ ಸಹಜವಾಗಿ ಆಕ್ರೋಶ ವ್ಯಕ್ತವಾಗಿದೆ.

ಕೇಣಿ ಬಂದರು ಸುತ್ತಮುತ್ತ 103 ಹಳ್ಳಿಗಳ ಜನತೆಯ ಜೀವನ- ಜೀವನೋಪಾಯದ ಮೇಲೆ ಗಂಭೀರ ಪರಿಸ್ಥಿತಿ ಎದುರಾಗಲಿದ್ದು , ರೈತರು ಮತ್ತು ಮೀನುಗಾರರ ನಿದ್ದೆ ಕಸಿದುಕೊಂಡಿರುವ ಈ ಯೋಜನೆ ವಿರುದ್ಧ ಪ್ರತಿಭಟನೆಗೆ ಈಗಾಗಲೇ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ.

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ಶ್ರೀ ಗಜಾನನ ಟ್ಯಾಕ್ಸಿ ಯೂನಿಯನ್ ಈಗಾಗಲೇ ಬೆಂಬಲ ಘೋಷಿಸಿದ್ದು. ಇನ್ನುಳಿದಂತೆ , ವ್ಯಾಪಾರಸ್ಥರು, ಗುಡಂಗಡಿಕಾರರು, ಹೊಟೇಲ್ ಉದ್ಯಮಿಗಳು ಸೇರಿದಂತೆ ಅನೇಕರು ಅಂಕೋಲಾ ಬಂದ್ ಯಶಸ್ವಿಯಾಗಲು ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಹೋರಾಟಗಾರರು ವ್ಯಕ್ತಪಡಿಸುತ್ತಿದ್ದಾರೆ..

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಣಕು ಶವ ಮೆರವಣಿಗೆ ನಡೆದಿಡಲಿದ್ದು, ಜನರ ಭಾವನೆ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ದೊರಕಿದೆ.

ರಾಜು ಮಾಸ್ತಿ ಹಳ್ಳ ಅವರು ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಉತ್ತಮ ಆಸ್ಪತ್ರೆಯಿಲ್ಲದೆ, ಅನೇಕ ಮೂಲಭೂತ ಸಮಸ್ಯೆಗಳು ಬಗೆಹರಿಯದೆ ಇದ್ದಾಗ ಸರ್ಕಾರ ಜನರ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿ ಬಂದರು ಯೋಜನೆಗೆ ಒತ್ತು ನೀಡುತ್ತಿದೆ ಎಂದು ಕಿಡಿಕಾರಿದರು.

ಈ ನಡುವೆ ಧರಣಿ ವೇದಿಕೆಯಲ್ಲಿ ಮಹಿಳೆಯೊಬ್ಬರು ಅಣಕು ಶವಕ್ಕೆ ಹೂಹಾರ ಹಾಕಿ, ಅಗರಬತ್ತಿ ಹಚ್ಚಿ, ಬಾಯಿ ಬಡೆದು ಕಂಪನಿಗೆ ಶಾಪ ಹಾಕಿದ ದೃಶ್ಯ ಜನರ ಕಣ್ಣೀರು ಮತ್ತು ಕೋಪ ಎರಡನ್ನೂ ಹೆಚ್ಚಿಸಿದಂತೆ ಕಂಡಿತು. ಸಾರ್ವಜನಿಕರ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದರಿಂದ ನಾಳೆಯ ಕರಾಳ ದಿನಾಚರಣೆ ಹಾಗೂ ಅಂಕೋಲಾ ಬಂದ್ ಉಗ್ರ ರೂಪ ಪಡೆಯುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಜನರ ಬಡಿದಾಡುವ ಹೃದಯಶಬ್ದ ಕೇಳಲಿದೆಯಾ? ಅಥವಾ ಹೋರಾಟ ಇನ್ನಷ್ಟು ಕಠಿಣ ಹಂತಕ್ಕೆ ಸಾಗಲಿದೆಯಾ? ಎಂಬ ಕುತೂಹಲ ಜಿಲ್ಲೆಯಲ್ಲಿ ಗಟ್ಟಿಯಾಗಿ ಬೇರೂರಿದೆ.

Share This Article