ಕಸಿದುಕೊಂಡ ಕೆಲಸ, ಅಡವಿಟ್ಟ ಒಡವೆ: ನಯನಾಳ ಸಾವಿಗೆ ಕಾರಣವಾಯ್ತಾ ಕೌಟುಂಬಿಕ ದೌರ್ಜನ್ಯ?

News Desk
2 Min Read

ಅಂಕೋಲಾ: ಹದಿಮೂರು ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ವಿವಾಹಿತೆಯೊಬ್ಬಳು ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೆ ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅಂಕೋಲಾ ತಾಲೂಕಿನ ಹೊಸೂರು ಗ್ರಾಮದಲ್ಲಿ ಪ್ರಕರಣವೊಂದು ದಾಖಲಾಗಿದೆ.

‘ನೀನು ಬದುಕಿ ಏನು ಪ್ರಯೋಜನ, ಸತ್ತರೆ ಒಳ್ಳೆಯದು’ ಎಂದು ಗಂಡನ ಮನೆಯವರು ನಿಂದಿಸಿದ್ದು, ಇದೇ ಮಾತುಗಳು ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿವೆ ಎಂದು ದೂರಿನಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ.

ಮೃತ ಮಹಿಳೆಯನ್ನು ಹೊಸೂರಿನ ರಾಮಚಂದ್ರ @ ಕೃಷ್ಣ ಪ್ರಭು ಎಂಬಾತನ ಪತ್ನಿ ನಯನಾ (35) ಎಂದು ಗುರುತಿಸಲಾಗಿದೆ. ಆಕೆಯ ಸಾವಿಗೆ ಗಂಡ ರಾಮಚಂದ್ರ, ಮಾವ ಮೋಹನ ಬಾಲಚಂದ್ರ ಪ್ರಭು ಹಾಗೂ ಅತ್ತೆ ತಾರಾ ಅವರ ಕಿರುಕುಳವೇ ಕಾರಣವೆಂದು ಆರೋಪಿಸಿ ಮೃತಳ ಸಹೋದರ, ಗುಳ್ಳಾಪುರ ನಿವಾಸಿ ನಾಗರಾಜ ಲಕ್ಷ್ಮಣ ಭಂಡಾರಿ ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು:ಸುಮಾರು 13 ವರ್ಷಗಳ ಹಿಂದೆ ನಯನಾಳನ್ನು ರಾಮಚಂದ್ರನಿಗೆ ವಿವಾಹ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿದ್ದ ಸಂಸಾರದಲ್ಲಿ ನಂತರ ಬಿರುಕು ಮೂಡಿದ್ದು, ಪತಿ, ಅತ್ತೆ ಹಾಗೂ ಮಾವ ಸೇರಿ ನಯನಾಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಎರಡು ಕುಟುಂಬಗಳ ಹಿರಿಯರು ಸೇರಿ ರಾಜಿ ಪಂಚಾಯಿತಿ ಮಾಡಿದ್ದರೂ, ಆರೋಪಿಗಳ ವರ್ತನೆಯಲ್ಲಿ ಬದಲಾವಣೆಯಾಗಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಯನಾ ಕೆಲಸಕ್ಕೆ ಹೋಗುತ್ತಿದ್ದ ಸ್ಥಳಕ್ಕೂ ತೆರಳಿ ಆಕೆಯ ಕೆಲಸ ಹೋಗುವಂತೆ ಮಾಡಿದ್ದರು ಎಂಬ ಆರೋಪವಿದೆ. ಇದರಿಂದ ಜೀವನೋಪಾಯಕ್ಕೆ ಕಷ್ಟವಾಗಿ ನಯನಾ ತನ್ನ ಒಡವೆಗಳನ್ನು ಬ್ಯಾಂಕಿನಲ್ಲಿ ಅಡಮಾನ ಇಟ್ಟಿದ್ದಳು. ಈ ಕುರಿತು ಬ್ಯಾಂಕಿನಿಂದ ನೋಟಿಸ್ ಮನೆಗೆ ಬಂದಾಗ, ರೊಚ್ಚಿಗೆದ್ದ ಗಂಡ ಹಾಗೂ ಅತ್ತೆ-ಮಾವ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಿಂದ ನೊಂದ ನಯನಾ, ಫೆಬ್ರವರಿ 20ರಂದು ರಾತ್ರಿ ಮನೆಯಲ್ಲೇ ಯಾವುದೋ ವಿಷ ಸೇವಿಸಿದ್ದರು ಎನ್ನಲಾಗಿದೆ. ಕೂಡಲೇ ಆಕೆಯನ್ನು ಮಾದನಗೇರಿ ,ಕುಮಟಾದ ಹೈಟೆಕ್ ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 22ರಂದು ರಾತ್ರಿ ನಯನಾ ಮೃತಪಟ್ಟಿದ್ದಾರೆ. ಅಂಕೋಲಾ ಠಾಣೆಯಲ್ಲಿ ದೂರಿನ ಅನ್ವಯ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article