ಜನಪರ ಆಡಳಿತಕ್ಕೆ ಬ್ರೇಕ್: ಅಂಕೋಲಾ ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ವರ್ಗಾವಣೆ..

News Desk
2 Min Read

ಅಂಕೋಲಾ (ಜ24): ವೃತ್ತಿಯಿಂದ ವೈದ್ಯರಾಗಿದ್ದು, ನಂತರ ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಆಡಳಿತ ಸೇವೆಗೆ ಪ್ರವೇಶಿಸಿದ ಯುವ ಹಾಗೂ ಕಾರ್ಯಕ್ಷಮ ಅಧಿಕಾರಿ ಡಾ. ಚಿಕ್ಕಪ್ಪ ನಾಯಕ ಅವರು, ಬೆಳಗಾವಿಯ ಬೈಲಹೊಂಗಲದಲ್ಲಿ ಗ್ರೇಡ್–2 ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ಬಳಿಕ 30 ಜೂನ್ 2025ರಂದು ಅಂಕೋಲಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯಾಗಿ (Executive Magistrate) ಗ್ರೇಡ್–1 ತಹಶೀಲ್ದಾರ್ ಹುದ್ದೆಗೆ ನೇಮಕಗೊಂಡು ಅಧಿಕಾರ ಸ್ವೀಕರಿಸಿದರು.

ಹಲವು ವರ್ಷಗಳ ನಂತರ ಅಂಕೋಲಾಕ್ಕೆ ದೊರಕಿದ ಪೂರ್ಣಾವಧಿ ತಹಶೀಲ್ದಾರ್ ಎಂಬ ಕಾರಣಕ್ಕೆ ಅವರ ಆಗಮನವೇ ಸಾರ್ವಜನಿಕರಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಜನಪರ ಆಡಳಿತದ ಹೊಸ ನಿರೀಕ್ಷೆ ಮೂಡಿಸಿತ್ತು.

ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರ ಕಾರ್ಯಶೈಲಿ ಜನಮನ ಗೆದ್ದಿತು. ಕಚೇರಿಯ ದಾಖಲೆ ಕೊಠಡಿಗೆ ತೆರಳಿ, ಸಿಬ್ಬಂದಿಗಳ ಮಧ್ಯೆ ಕುಳಿತು ಸಾರ್ವಜನಿಕ ಅರ್ಜಿಗಳನ್ನು ಸ್ವತಃ ಸ್ವೀಕರಿಸುವ ಮೂಲಕ ಬಡ–ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಿದರು. “ಸಾರ್ವಜನಿಕ ಅರ್ಜಿ ತಡವಾದರೆ ನಾನು ಸಹಿಸುವುದಿಲ್ಲ” ಎಂಬ ನಿಲುವನ್ನು ಕೇವಲ ಮಾತಿಗಷ್ಟೇ ಸೀಮಿತಗೊಳಿಸದೆ, ಕಡತಗಳನ್ನು ತಕ್ಷಣ ಹುಡುಕಿ ಸೇವೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಿಸ್ತು, ಸರಳತೆ ಹಾಗೂ ಮಾನವೀಯತೆಯ ಸಂಯೋಜನೆಯೇ ಅವರ ಆಡಳಿತದ ಗುರುತು. ಅವರ ಕೆಲಸದ ಶೈಲಿ ನೋಡಿದರೆ “ಭಾರತ್ ಆನೆ ನೀನು” ಚಿತ್ರದ ಜನಪರ ನಾಯಕನ ನೆನಪು ಸಹಜವಾಗಿ ಮೂಡುತ್ತದೆ. ಕಚೇರಿ ಆಡಳಿತಕ್ಕಷ್ಟೇ ಸೀಮಿತವಾಗದೆ, ಕ್ಷೇತ್ರಮಟ್ಟದ ತುರ್ತು ಸಂದರ್ಭಗಳಲ್ಲೂ ಅವರು ಪರಿಣಾಮಕಾರಿ ನಾಯಕತ್ವ ತೋರಿದರು. ನವಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಸಂಭವಿಸಿದ ಅಪಾಯಕಾರಿ ರಾಸಾಯನಿಕ ಟ್ಯಾಂಕರ್ ಅಪಘಾತದ ವೇಳೆ ವಿವಿಧ ಇಲಾಖೆಗಳೊಂದಿಗೆ ತಕ್ಷಣ ಸಮನ್ವಯ ಸಾಧಿಸಿ ಸಾರ್ವಜನಿಕ ಸುರಕ್ಷತೆ ಕಾಪಾಡಿದಕ್ಕಾಗಿ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರವೂ ಲಭಿಸಿತು.

ಇದರ ಜೊತೆಗೆ, ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಜನರ ಹೋರಾಟ ಇಂದಿಗೂ ನಿರಂತರವಾಗಿರುವ ಸಂವೇದನಾಶೀಲ ಸಂದರ್ಭದಲ್ಲಿ, ಪರಿಸ್ಥಿತಿ ಉದ್ವಿಗ್ನವಾಗದಂತೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಡಾ. ಚಿಕ್ಕಪ್ಪ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು.

ಕಾನೂನುಬದ್ಧ ಹಾಗೂ ಸಮತೋಲನದ ನಿಲುವು ತಾಳುತ್ತಾ, ಎಲ್ಲ ವರ್ಗಗಳ ಮಾತು ಆಲಿಸಿ ಪರಿಸ್ಥಿತಿ ಕೈಮೀರುವುದನ್ನು ತಡೆಯುವಲ್ಲಿ ಅವರು ಯಶಸ್ವಿಯಾದರು. ಭೂ ದಾಖಲೆಗಳ ಡಿಜಿಟಲೀಕರಣ, ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ, ಕಂದಾಯ ಇಲಾಖೆ ಸಿಬ್ಬಂದಿಗೆ ಆರೋಗ್ಯ ಶಿಬಿರಗಳಂತಹ ಹಲವು ಕಾರ್ಯಗಳಿಂದ ಅಲ್ಪಾವಧಿಯಲ್ಲಿಯೇ ಅಂಕೋಲಾದ ಆಡಳಿತಕ್ಕೆ ಚೈತನ್ಯ ತುಂಬಿದರು.

ಆದರೆ, ಕೇವಲ ಒಂದು ವರ್ಷದೊಳಗೆ ಸರ್ಕಾರದ ಆದೇಶದಂತೆ ಅವರು ವರ್ಗಾವಣೆಗೊಂಡಿದ್ದಾರೆ. ಡಾ. ಚಿಕ್ಕಪ್ಪ ನಾಯಕರು ತಮ್ಮ ಮೂಲ ಜಿಲ್ಲೆ ಬಾಗಲಕೋಟೆಯ ಮುಧೋಳ ತಾಲ್ಲೂಕಿಗೆ ಗ್ರೇಡ್–1 ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ. ಕಾನೂನುಬದ್ಧ ವರ್ಗಾವಣೆ ಆದರೂ, ಅಂಕೋಲಾ ಜನರ ಮನದಲ್ಲಿ ಮೂಡಿದ ಭಾವನೆ ಒಂದೇ—ಇವರು ಇನ್ನೂ ಅಂಕೋಲಾದಲ್ಲೇ ಉಳಿಯಬೇಕಿತ್ತು.

Share This Article