ಅಂಕೋಲಾ : ಹೊನ್ನೇಕೇರಿ ಗ್ರಾಮದ ಸರ್ವೇ ನಂ.61ರಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರವೂ, ಸುದ್ದಿ ಪ್ರಕಟವಾದ ಬೆನ್ನಲ್ಲೇ ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿಗಳು ನಡೆಯುತ್ತಿರುವ ಕಾಮಗಾರಿಗೆ ಮತ್ತಷ್ಟು ವೇಗ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಸಂದರ್ಭದಲ್ಲೇ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಮುಗಿಸಲು ಮುಂದಾದ ಪುರಸಭೆ, ರಸ್ತೆ ಬದಿಯಲ್ಲಿ ಚರಂಡಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಇದೀಗ ಮಣ್ಣನ್ನು ತುಂಬಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಷಯ ತಿಳಿದ ತಕ್ಷಣ ಸುಭಾಷ್ ಗಂಗಾಧರ ನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಚರಂಡಿ ವ್ಯವಸ್ಥೆ ಮಾಡದೇ ಕೇವಲ ರಸ್ತೆ ಬಿಲ್ಲು ಪಡೆಯುವ ಉದ್ದೇಶದಿಂದ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ರಸ್ತೆ ಒಂದು ಬದಿಯಲ್ಲಿ ಬಿಟ್ಟಿರುವ ಡ್ರೈನೇಜ್ ಜಾಗವನ್ನು ಕಾಂಕ್ರೀಟ್ ರಸ್ತೆಗೆ ಸಮತಟ್ಟಾಗಿ ಮಣ್ಣಿನಿಂದ ತುಂಬುವುದರಿಂದ ಮುಂದಿನ ದಿನಗಳಲ್ಲಿ ನೀರು ಹರಿಯಲು ಯಾವುದೇ ಅವಕಾಶವೇ ಉಳಿಯುವುದಿಲ್ಲ. ಇದು ಮತ್ತಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವಾಗಲಿದೆ” ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದಾಗ, “ಎಸ್ಟಿಮೇಟ್ನಲ್ಲಿ ರಸ್ತೆ ಆದ ನಂತರ ರಸ್ತೆ ಬದಿಯಲ್ಲಿ ಮಣ್ಣು ಹಾಕಬೇಕಿದೆ. ಈಗ ಮಣ್ಣು ಹಾಕುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗಟಾರಕ್ಕೆ ಅನುದಾನ ಬಿಡುಗಡೆಯಾದ ಬಳಿಕ ಈ ಮಣ್ಣನ್ನು ತೆರವುಗೊಳಿಸಿ ಚರಂಡಿ ಮಾಡಲಾಗುವುದು” ಎಂಬ ಉತ್ತರ ನೀಡಿದ್ದಾರೆ.
ಆದರೆ ಸ್ಥಳೀಯರು ಹಾಗೂ ಸುಭಾಷ್ ನಾಯ್ಕ ಅವರ ಪ್ರಕಾರ, ಇದು ವಾಸ್ತವದಲ್ಲಿ ಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ರಸ್ತೆ ಕಾಮಗಾರಿ ಮುಗಿಸಿ ಗುತ್ತಿಗೆದಾರರ ಬಿಲ್ಲು ಪಾವತಿಸುವ ಉದ್ದೇಶವೇ ಇದರಲ್ಲಿ ಅಡಗಿದೆ ಎಂಬ ಆರೋಪ ಕೇಳಿಬಂದಿದೆ.
ಸುಮಾರು ₹7.56 ಲಕ್ಷ ಮೊತ್ತದ ಈ ಕಾಮಗಾರಿಯಲ್ಲಿ ಡ್ರೈನೇಜ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ನ್ಯಾಯಾಲಯದಲ್ಲಿ ಈಗಾಗಲೇ ಸಂಬಂಧಪಟ್ಟ ಪ್ರಕರಣ ವಿಚಾರಣೆಯಲ್ಲಿದ್ದರೂ ಸಹ ಯಾವುದೇ ತಾಂತ್ರಿಕ ಹಾಗೂ ವೈಜ್ಞಾನಿಕ ಡ್ರೈನೇಜ್ ವ್ಯವಸ್ಥೆ ಕಲ್ಪಿಸದೇ ಕಾಮಗಾರಿ ಮುಂದುವರಿಸಿರುವುದು ಪುರಸಭೆಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ. ಇದಕ್ಕೂ ಮುನ್ನ ಸುಭಾಷ್ ನಾಯ್ಕ ಅವರು ಪುರಸಭೆ ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಲೀಗಲ್ ನೋಟಿಸ್ ನೀಡಿರುವುದು ಗಮನಾರ್ಹವಾಗಿದ್ದು, ಇದೀಗ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಕಾಮಗಾರಿ ಬಿಲ್ಲನ್ನು ತಡೆಹಿಡಿಯುವಂತೆ ಹಾಗೂ ಕಾನೂನು ಕ್ರಮ ಮುಂದುವರಿಸುವುದಾಗಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದಕ್ಕೂ ನಡುವೆ, ರಸ್ತೆ ಕಾಮಗಾರಿಗೆ ತಡೆ ಸಂಬಂಧಿತ ಯಾವುದೇ ಆದೇಶ ಹೊರಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಮುಖ್ಯಾಧಿಕಾರಿಗಳು ಕೇವಿಯಟ್ ಸಲ್ಲಿಸಿರುವ ಬಗ್ಗೆ ತಿಳಿದುಬಂದಿದೆ, ಇದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. “ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಡ್ರೈನೇಜ್ ವ್ಯವಸ್ಥೆ ಇಲ್ಲದೆ ರಸ್ತೆ ನಿರ್ಮಿಸಿ, ನಂತರ ಮಣ್ಣನ್ನು ತುಂಬಿ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರಿಯುತ್ತದೆ” ಎಂದು ಸುಭಾಷ್ ನಾಯ್ಕ ಎಚ್ಚರಿಸಿದ್ದಾರೆ.
ಸಾರ್ವಜನಿಕರ ದೃಷ್ಟಿಯಲ್ಲಿ, ಚರಂಡಿ ವ್ಯವಸ್ಥೆ ಇಲ್ಲದೆ ಮಾಡಿದ ಈ ರಸ್ತೆ ಕಾಮಗಾರಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಮತ್ತೊಂದು ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಪುರಸಭೆಯ ಮುಂದಿನ ಕ್ರಮಗಳತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ವರದಿ: ಕಿರಣ ಗಾಂವಕರ

