ಅಂಕೋಲಾ, ಸೆಪ್ಟೆಂಬರ್ 23: ತಾಲೂಕಿನ ಹಾರವಾಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ತಡರಾತ್ರಿ ನಡೆದಿದೆ ಎನ್ನಲಾದ ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ದಿನಾಂಕ 22-09-2025ರ ರಾತ್ರಿ ಸುಮಾರು 11:40 ಗಂಟೆಗೆ, ಅಂದಾಜು 30-35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಗಂಭೀರ ಗಾಯಗಳೊಂದಿಗೆ ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಗಾಯಾಳು ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಥವಾ ಬೇರಾವುದೋ ವಾಹನದಿಂದ ಕೆಳಗೆ ಬಿದ್ದಿದ್ದಾಗ, ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಪಘಾತದ ತೀವ್ರತೆಗೆ ವ್ಯಕ್ತಿಗೆ ಹಲವು ಗಾಯಗಳಾಗಿವೆ.ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ, ಸ್ಥಳೀಯ ನಿವಾಸಿ ಶ್ರೀ ಮಂಜುನಾಥ ಬಾನಾವಳಿಕರ ಅವರು ಇಂದು ಮಧ್ಯಾಹ್ನ ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅವರ ದೂರಿನ ಮೇರೆಗೆ, ಅಂಕೋಲಾ ಠಾಣೆಯಲ್ಲಿ ಗುನ್ನಾ ನಂಬರ್ 172/2025 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳುವಿನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಇವರ ವಿವರಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ:
ವಯಸ್ಸು: ಅಂದಾಜು 30-35 ವರ್ಷ,
ಎತ್ತರ: 5 ಅಡಿ 5 ಇಂಚು
ಮೈಬಣ್ಣ ಮತ್ತು ಮೈಕಟ್ಟು: ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು
ಧರಿಸಿದ ಬಟ್ಟೆ: ಬಿಳಿ ಮತ್ತು ಬೂದಿ ಬಣ್ಣದ ಚೌಕಳಿ (ಚಕ್ಸ್) ಶರ್ಟ್ ಹಾಗೂ ಬೂದಿ ಬಣ್ಣದ ಚಡ್ಡಿ.
ಈ ಚಹರೆಯ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಅಥವಾ ಅಪಘಾತಕ್ಕೆ ಕಾರಣವಾದ ವಾಹನದ ಬಗ್ಗೆ ಸುಳಿವು ಸಿಕ್ಕಲ್ಲಿ, ತಕ್ಷಣ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: (08388) 220333, 9480805250, ಅಥವಾ 9480805268
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

