ಅಂಕೋಲಾ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆ ಮೀನು ಮಾರುಕಟ್ಟೆಗೆ ಆಗಮಿಸುವ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಮಾರುಕಟ್ಟೆಯ ಪ್ರವೇಶ ದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳಿಗೆ ಸೇರಿದ ಸರಕು ಸಾಗಾಣಿಕಾ ವಾಹನಗಳು ಬೆಳಗ್ಗೆ 10:00 ಗಂಟೆಯ ನಂತರ ಅಡ್ಡಾದಿಡ್ಡಿಯಾಗಿ ನಿಲ್ಲುವುದರಿಂದ, ಮೀನು ಖರೀದಿಗೆ ಬರುವ ಗ್ರಾಹಕರು ಹಾಗೂ ಸ್ಥಳೀಯರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಸಮಸ್ಯೆಯ ವಿವರ: ಪ್ರತಿದಿನ ಬೆಳಿಗ್ಗೆ ಮೀನು ಮಾರುಕಟ್ಟೆಯು ಅತ್ಯಂತ ಜನನಿಬಿಡವಾಗಿರುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದಲೂ ನೂರಾರು ಜನರು ಮೀನು ಖರೀದಿಸಲು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಸರಿಯಾಗಿ ವ್ಯಾಪಾರದ ಚಟುವಟಿಕೆಗಳು ಗರಿಗೆದರುವ ಸಮಯವಾದ ಬೆಳಗ್ಗೆ 10 ಗಂಟೆಯ ನಂತರ, ಮೀನು ಮಾರುಕಟ್ಟೆ ಮಂದಿರುವ ಕಿರಾಣಿ ಅಂಗಡಿಗಳಿಗೆ ಸರಕುಗಳನ್ನು ಪೂರೈಸುವ ದೊಡ್ಡ ವಾಹನಗಳು ಮಾರುಕಟ್ಟೆಯ ದಾರಿ ಯಲ್ಲಿಯೇ ನಿಲ್ಲುತ್ತವೆ.
ಈ ವಾಹನಗಳಿಂದಾಗಿ ಪಾದಚಾರಿಗಳು ಸಂಚರಿಸಲು ಜಾಗವಿಲ್ಲದಂತಾಗುತ್ತದೆ. ವಿಶೇಷವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ವಾಹನಗಳ ದಟ್ಟಣೆಯ ನಡುವೆ ಸಾಗಿ, ಮಾರುಕಟ್ಟೆ ತಲುಪುವುದು ದುಸ್ತರವಾಗಿದೆ. ಇದರಿಂದಾಗಿ ಹಲವು ಬಾರಿ ಸಂಚಾರ ದಟ್ಟಣೆ ಉಂಟಾಗಿ, ವಾಗ್ವಾದಗಳು ನಡೆಯುವುದು ಸಾಮಾನ್ಯವಾಗಿದೆ.
ಸಾರ್ವಜನಿಕರ ಆರೋಪ: ಮೀನು ಮಾರುಕಟ್ಟೆಗೆ ಬರುವ ದಾರಿಯೇ ಚಿಕ್ಕದಾಗಿದೆ. ಇದರಲ್ಲಿ ದೊಡ್ಡ ವಾಹನಗಳು ನಿಂತರೆ ನಾವು ಎಲ್ಲಿ ಹೋಗಬೇಕು? ಬೆಳಗಿನ ಸಮಯದಲ್ಲಿ ಸರಕು ಇಳಿಸುವುದನ್ನು ಬಿಟ್ಟು, ವ್ಯಾಪಾರ ಮುಗಿಯುವ ಹೊತ್ತಿಗೆ ಅಥವಾ ರಾತ್ರಿ ಸಮಯದಲ್ಲಿ ಇಳಿಸಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಪುರಸಭೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಈ ಕೆಳಗಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
✅ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ಭಾರೀ ಸರಕು ಸಾಗಣೆ ವಾಹನಗಳ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
✅ಕಿರಾಣಿ ಅಂಗಡಿಗಳಿಗೆ ಸರಕು ಇಳಿಸಲು ಬೆಳಗಿನ ಜಾವ ಅಥವಾ ಮಧ್ಯಾಹ್ನದ ನಂತರದ ಸಮಯವನ್ನು ನಿಗದಿಪಡಿಸಬೇಕು.ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ದಂಡ ವಿಧಿಸಿ, ಶಿಸ್ತು ಕ್ರಮ ಜರುಗಿಸಬೇಕು.
ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

