ಅಂಕೋಲಾದ ಕೋಟೆವಾಡ ದಲ್ಲಿ ಸರ್ಕಾರಿ ರಸ್ತೆಗೆ ಬಿಟ್ಟಿರುವ ಜಮೀನನ್ನು ಪ್ರಭಾವಿಗಳು ಅಕ್ರಮ ಕಟ್ಟಡ ಕಟ್ಟಿದ್ದಾರೆ ಎಂದು ಆರೋಪ – ನಕ್ಷೆ, ಆಕಾರ ಇಲ್ಲದ ಕಾರಣ ಸರ್ವೆ ನಿರಾಕರಿಸಿದ ಭೂಮಾಪಕ; ಅರ್ಜಿದಾರನ ಆಕ್ಷೇಪ..

News Desk
2 Min Read

ಅಂಕೋಲಾ, ಜುಲೈ 22: ಅಂಕೋಲಾ ಪುರಸಭೆ ವ್ಯಾಪ್ತಿಯ ಶೆಡಗೇರಿ ಗ್ರಾಮದ ಸರ್ವೆ ನಂ. 80ಬ, . 0-01-06 ಜಾಗೆಯು ಪಹಣಿಯಲ್ಲಿ “ರಸ್ತೆಗೆ ಸೇರಿದ ಜಾಗ” ಎಂದು ನಮೂದಾಗಿದೆ. ಆದರೆ ಈ ಜಾಗದಲ್ಲಿ ಕೆಲವರು ಅನಧಿಕೃತವಾಗಿ ಶೆಡ್ ಕಟ್ಟಿದ್ದಾರೆ ಎಂಬ ಆರೋಪ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದನ್ನು ತೆರವುಗೊಳಿಸಬೇಕೆಂದು ಕೋಟೆವಾಡ ನಿವಾಸಿ ಹಾಗೂ ಪಿಡಬ್ಲ್ಯೂಡಿ ಗುತ್ತಿಗೆದಾರ ಸಂಜೀವ್ ಪಿ. ನಾಯ್ಕ್ ಅವರು ಹಲವು ವರ್ಷಗಳಿಂದ ಅಧಿಕಾರಿಗಳ ಬಳಿ ದೂರು ನೀಡುತ್ತಾ ಒಬ್ಬಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ.

2024ರ ಡಿಸೆಂಬರ್ 10ರಂದು ಈ ಜಾಗದ ಗಡಿ ಗುರುತಿಸಲು ಮತ್ತು ಅಳತೆ ಮಾಡಲು ಭೂಮಾಪನ ಇಲಾಖೆಯಿಂದ ನೋಟಿಸ್ ಬಂದರೂ, ಅಳತೆ ಆಗದೆ ಮುಂದೂಡ ಲಾಗಿತ್ತು. ನಂತರ ಜುಲೈ 4, 2025 ರಂದು ಅವರು ಖುದ್ದಾಗಿ ಅಂಕೋಲಾ ಭೂ ಮಾಪಕ ನೋರ್ವನ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.ಅದರ ಬಳಿಕ ಭೂಮಾಪನ ಇಲಾಖೆ ಜುಲೈ 21, 2025 ರಂದು ಸರ್ವೆ ಮಾಡುವುದಾಗಿ ನಿಗದಿ ಮಾಡಿ,ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಿಗೆ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗೆ ನೋಟಿಸ್ ಮುಖಾಂತರ ಮಾಹಿತಿ ನೀಡಲಾಗಿತ್ತು. ಸಂಜೀವ್ ನಾಯ್ಕ್ ಅವರು ಅದೇ ದಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಸರ್ವೆ ವೇಳೆ ಯಾವುದೇ ಗಲಾಟೆ ನಡೆದರೆ ತಡೆಗಟ್ಟಲು ಪೊಲೀಸ್ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು. ತಹಶೀಲ್ದಾರ್ ಅವರು ಇದನ್ನು ಗಮನಿಸಿ ಪೋಲೀಸ್ ಇಲಾಖೆಗೆ ಪತ್ರ ಬರೆದು ಸಿಬ್ಬಂದಿಗಳನ್ನು ಸ್ಥಳಕ್ಕೆ ನಿಯೋಜಿಸಲು ಸೂಚಿಸಿದ್ದರು.

ನಿನ್ನೆ ದಿನಾಂಕ 21-07-2025ರಂದು ಬೆಳಿಗ್ಗೆ 10:30ಕ್ಕೆ ಪುರಸಭೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ್, . ಸ್ಥಳೀಯ ಹೂವ ಕಂಡೇಕರ್ ಇನ್ನಿತರರು ಹಾಗೂ ಅರ್ಜಿದಾರ ಸಂಜೀವ್ ನಾಯ್ಕ್ ಸ್ಥಳದಲ್ಲಿ ಹಾಜರಿದ್ದರೂ, ಆದರೆ ಭದ್ರತೆ ನೀಡಬೇಕಾದ ಪೋಲೀಸರು ಆಗಮಿಸಲೇ ಇಲ್ಲ. ಈ ವಿಷಯ ಸಂಬಂಧ ಸಂಜೀವ್ ನಾಯ್ಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರ ನಿರೀಕ್ಷೆಯಂತೆ ಸರ್ವೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ಭೂಮಾಪಕ ಪ್ರಶಾಂತ್ ಶೇಟ್ ಅವರು, “ಈ ಜಾಗಕ್ಕೆ ನಕ್ಷೆ ಇಲ್ಲ, ಆಕಾರದ ಬಂದ್ ದಾಖಲೆ ಇಲ್ಲ. ಈ ಸ್ಥಿತಿಯಲ್ಲಿ ನಾನು ಅಳತೆ ಮಾಡಲಾಗದು,” ಎಂದು ಹೇಳಿದಾಗ, ಎಲ್ಲರೂ ನಿರಾಶರಾದರು. ಈ ವಿಷಯವನ್ನು ಸರ್ವೆ ಇಲಾಖೆಯವರು ಆಗಲೇ ತಿಳಿಸಬೇಕಿತ್ತು ಎಂಬ ಬೇಸರ ಸ್ಥಳೀಯರಲ್ಲಿ ವ್ಯಕ್ತವಾಯಿತು.

ಹೀಗೆ, ಸರ್ವೆ ಇಲಾಖೆಯಿಂದ ಬಂದ ನೋಟಿಸ್, ಅಧಿಕಾರಿಗಳ ಹಾಜರಾತಿ, ಸ್ಥಳೀಯರ ಸಮಯ-ಎಲ್ಲವೂ ವ್ಯರ್ಥವಾಯಿತು. ಭೂಮಾಪಕರು ಈಗ ಅಳತೆ ಮಾಡಲಾಗದು ಎಂಬ ಕಾರಣದೊಂದಿಗೆ ಪಂಚನಾಮೆ ತಯಾರಿ ಮಾಡಿ ತಹಶೀಲ್ದಾರಿಗೆ ವರದಿ ಸಲ್ಲಿಸುತ್ತಿದ್ದಾರೆ.

Share This Article