ಕೇಣಿ ಬಂದರು ವಿರುದ್ಧ ಮೀನುಗಾರರ ಆಕ್ರಂದನ: “ನಮ್ಮ ಹಳ್ಳಿಯ ಬದುಕು ಕಾಪಾಡಿ” — ತಹಸೀಲ್ದಾರ್ ಮುಖಾಂತರ ಸಿಎಂಗೆ ಮನವಿ- 9ನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ..

News Desk
2 Min Read

ಅಂಕೋಲಾ ತಾಲೂಕಿನ ಕೇಣಿ ಸರ್ವಋತು ವಾಣಿಜ್ಯ ಬಂದರು ಯೋಜನೆಯನ್ನು ಕೈ ಬಿಡಬೇಕೆಂದು ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಕಂತ್ರವಾಡದ ಸಾಂಪ್ರದಾಯಿಕ ಮೀನುಗಾರರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಅಂಕೋಲಾ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.

ನವೆಂಬರ್ 12ರಿಂದ ಆರಂಭವಾದ ಧರಣಿ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಡುತ್ತಿದ್ದರೂ, ಸರ್ಕಾರ ಮತ್ತು ಜನಪ್ರತಿನಿಧಿಗಳ ಮೌನ ಜನರ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ನೈಸರ್ಗಿಕ ಸಮುದ್ರ ಪರಿಸರ, ಮ್ಯಾಂಗ್ರೋವ್ ಅರಣ್ಯ, ಮೀನು–ಕಪ್ಪೆ–ಚಿಪ್ಪು–ಶಂಖುಗಳ ವಾಸಸ್ಥಳ, ಮತ್ತು ಮೀನುಗಾರರ ಪರಂಪರೆಯ ಬದುಕನ್ನು ಬಂದರು ಯೋಜನೆ ಸಂಪೂರ್ಣ ನಾಶಗೊಳಿಸಲಿದೆ ಎಂಬ ಆತಂಕ ಮೀನುಗಾರರಲ್ಲಿ ಗಟ್ಟಿಯಾಗಿ ವ್ಯಕ್ತವಾಗಿದೆ.

ಹರಿಕಂತ್ರವಾಡದ ಮಹಿಳೆ ಸರಿತಾ ಸುರಜ್ ಹರಿಕಂತ್ರ ಸಾರ್ವಜನಿಕ ಸಭೆಯಲ್ಲಿ ಮನವಿ ಓದಿ ಹೇಳಿ “ಸರ್ಕಾರವನ್ನು ನಂಬಿ ನಾವು ಬೀದಿಗೆ ಬಂದಿದ್ದೇವೆ. ನಮ್ಮ ಸಮುದ್ರ, ನಮ್ಮ ಹೊಟ್ಟೆ, ನಮ್ಮ ಮಕ್ಕಳ ಹಸಿವು—ಎಲ್ಲವೂ ಉಳಿಸಿಕೊಡಿ” ಎಂದು ಮನವಿಮಾಡಿದರು. ಭಾವಿಕೇರಿ ಮತ್ತು ಕೇಣಿ ಸಮುದ್ರ ತೀರವು ಚಿಕ್ಕ ದೋಣಿ, ಬೀಸು ಬಲೆ, ಎಂಡಿ ಬಲೆ, ಗೋರಬಲೆ ಹೀಗೆ ಪರಂಪರ ಗತವಾಗಿ ಮೀನುಗಾರಿಕೆಯನ್ನು ನಂಬಿಕೊಂಡು ಬದುಕುತ್ತಿರುವ ನೂರಾರು ಕುಟುಂಬಗಳ ಆಧಾರವಾಗಿದೆ. ಇದೇ ಸ್ಥಳಗಳಿಗೆ ಮೀನು–ಕಪ್ಪೆ–ಸಮುದ್ರ ಜೀವಿಗಳು ಪ್ರಜನನಕ್ಕಾಗಿ ಬರುತ್ತವೆ. ಬಂದರು ಕಾಮಗಾರಿಯ ಯಂತ್ರೋಪಕರಣಗಳು, ಮಣ್ಣು ತುಂಬಿಸುವ ಕೆಲಸ, ತೈಲ–ರಾಸಾಯನಿಕ ಸೋರಿಕೆ—ಎಲ್ಲವೂ ಈ ಜೀವಜಗತ್ತನ್ನೇ ನಾಶಗೊಳಿಸುವ ಅಪಾಯವನ್ನು ಉಂಟುಮಾಡುತ್ತದೆ ಎಂದು ಮೀನುಗಾರರು ಮನವಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಮ್ಯಾಂಗ್ರೋವ್ ಅರಣ್ಯವನ್ನು ಮೀನುಗಾರರು “ಪ್ರಕೃತಿ ಕಟ್ಟಿದ ಕೋಟೆ” ಎಂದು ವಿವರಿಸಿದ್ದಾರೆ. ಈ ಅರಣ್ಯ ಕಡಿಯಾದರೆ ಕೇಣಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಚಂಡಮಾರುತ, ಪ್ರವಾಹ, ಸಮುದ್ರ ದಾಳಿ—ಅಪಾಯಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚುತ್ತದೆ. “ಇದು ಕೇವಲ ಪರಿಸರದ ನಾಶವಲ್ಲ, ನಮ್ಮ ಬದುಕಿನ ನಾಶ” ಎಂದು ಮೀನುಗಾರರು ಎಚ್ಚರಿಸಿದ್ದಾರೆ. ಬಂದರು ಯಂತ್ರೋಪಕರಣಗಳ ಶಬ್ದ, ದೊಡ್ಡ ಅಲೆತಡೆಗೋಡೆ, ಮತ್ತು ಸಮುದ್ರ ಪ್ರವೇಶಕ್ಕೆ ಅಡ್ಡಿಯಾಗುವ ರಚನೆಗಳಿಂದ ದೋಣಿಗಳ ಸಂಚಾರವೇ ಕಷ್ಟವಾಗಲಿದೆ. ಮಕ್ಕಳ ಶಿಕ್ಷಣದಿಂದ ಹಿಡಿದು ವೃದ್ಧರ ಆರೋಗ್ಯವರೆಗೆ ಶಬ್ದ ಮಾಲಿನ್ಯದ ತೀವ್ರತೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಹರಿಕಂತ್ರವಾಡ ಸಮೀಪದ ಸಮುದ್ರ ತೀರ ಪ್ರವಾಸೋದ್ಯಮಕ್ಕೂ ಪ್ರಸಿದ್ಧವಾಗಿದ್ದು, ಅದನ್ನು ಬಂದರು ಮಾಲಿನ್ಯ, ಗದ್ದಲ, ಯಂತ್ರೋಪಕರಣ ಗಳಿಂದ ಹಾಳು ಮಾಡಿದರೆ ಸಣ್ಣ ವ್ಯಾಪಾರಿಗಳು, ಹೋಟೆಲ್‌ಗಳು, ಕೈತೋಟದ ಉದ್ಯೋಗಗಳು—ಎಲ್ಲ ಆರ್ಥಿಕ ಹಾನಿಗೆ ಗುರಿಯಾಗುತ್ತವೆ ಎಂದು ಮೀನುಗಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕೇಣಿಯಲ್ಲಿ JSW ಕಂಪನಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ವಾಣಿಜ್ಯ ಬಂದರು ಕೈಬಿಡಬೇಕೆಂದು ಮೀನುಗಾರರು ಘೋಷಿಸಿದ್ದಾರೆ.ಕೇಣಿ ಬಂದರು ಯೋಜನೆ ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಹೋರಾಟ ಇನ್ನಷ್ಟು ಉಗ್ರವಾಗುವುದು ಖಚಿತವೆಂದು ಎಚ್ಚರಿಸಿದ್ದಾರೆ.

ಇಂದು ಧರಣಿ ಸ್ಥಳದಲ್ಲಿ ಮೀನುಗಾರರು ತಮ್ಮ ರಕ್ತದ ಹೆಬ್ಬಟ್ಟು ಮುದ್ರೆಯನ್ನು ಹಾಕಿ ಮನವಿ ಸಲ್ಲಿಸಿದರು. ಜೊತೆಗೆ ಪೋಸ್ಟ್‌ಕಾರ್ಡ್ ಅಭಿಯಾನವನ್ನು ಆರಂಭಿಸಿ, “ನಮ್ಮ ಬದುಕು ರಕ್ಷಿಸಿ, ಕೇಣಿ ಬಂದರು ಕೈಬಿಡಿ” ಎಂಬ ಬೇಡಿಕೆಯನ್ನು ಸರ್ಕಾರಕ್ಕೆ ಕಳಿಸಿದ್ದಾರೆ. “ಬಡವರಿಗೆ ಜನಪರ ಯೋಜನೆಗಳನ್ನು ನೀಡಿದ ಸರ್ಕಾರ, ಇದೇ ಬಡವರ ಹೊಟ್ಟೆಯನ್ನು ಹೊಡೆಯುವಂತಹ ಈ ವಿನಾಶಕಾರಿ ಯೋಜನೆ ಕೈ ಬಿಡುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಇದೆ” ಎಂದು ಮೀನುಗಾರರು ವ್ಯಕ್ತಪಡಿಸಿದ್ದಾರೆ.

Share This Article