ಅಂಕೋಲಾ, ಅ.21: ಅಂಕೋಲಾ ಪುರಸಭೆಯ ಚುನಾಯಿತ ಸದಸ್ಯರ ಅಧಿಕಾರಾವಧಿ 12 ಅಕ್ಟೋಬರ್ 2025 ರಂದು ಮುಕ್ತಾಯಗೊಂಡ ನಂತರವೂ ಕೆಲವು ಸದಸ್ಯರು ಸಭೆ ಹಾಗೂ ಪತ್ರಿಕಾ ಪ್ರಕಟಣೆ ನೀಡುತ್ತಿರುವುದರಿಂದ ಸ್ಥಳೀಯ ಆಡಳಿತದಲ್ಲಿ ಗೊಂದಲ ಉಂಟಾಗಿದೆ.ಈ ಹಿನ್ನೆಲೆಯಲ್ಲಿ, ಸಾಮಾಜಿಕ ಹೋರಾಟಗಾರ ಸಂಜೀವ ಪಾಂಡುರಂಗ ನಾಯ್ಕ (ಕೋಟೆವಾಡ) ಅವರು ಅಂಕೋಲಾ ತಹಶೀಲ್ದಾರರ ಮೂಲಕ ಮಾನ್ಯ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಅರ್ಜಿ ಸಲ್ಲಿಸಿ, ಪುರಸಭೆಯ ಪ್ರಸ್ತುತ ಆಡಳಿತದ ಕುರಿತಂತೆ ಕಾನೂನಾತ್ಮಕ ಸ್ಪಷ್ಟನೆ ನೀಡುವಂತೆ ವಿನಂತಿಸಿದ್ದಾರೆ.
ಅವರ ಅರ್ಜಿಯಲ್ಲಿ ಅವರು ಉಲ್ಲೇಖಿಸಿರುವಂತೆ, ರಾಜ್ಯ ಚುನಾವಣಾ ಆಯೋಗದ ಅಧಿಕೃತ ಪಟ್ಟಿ ಪ್ರಕಾರ ಅಂಕೋಲಾ ಪುರಸಭೆಯ ಚುನಾಯಿತ ಮಂಡಳಿಯ ಅವಧಿ ಪೂರ್ಣಗೊಂಡಿದೆ, ಆದರೆ ಇನ್ನೂ ಕೆಲವರು ಅಧ್ಯಕ್ಷರ ಕೊಠಡಿಯಲ್ಲಿ ಸಭೆ ನಡೆಸಿ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಠರಾವು ಕೈಗೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಅವರು ಹೇಳಿದರು
“ಚುನಾಯಿತ ಸದಸ್ಯರ ಅವಧಿ ಮುಗಿದ ಬಳಿಕ ಅವರ ಅಧಿಕಾರ ಸ್ವಯಂ ಕೊನೆಗೊಳ್ಳುತ್ತದೆ. ಹೀಗಿದ್ದರೂ ಕೆಲವರು ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥಮಾಡಿಕೊಂಡು ಅಧಿಕಾರ ವಿಸ್ತಾರವಾಗಿದೆ ಎಂದು ಹೇಳುತ್ತಿದ್ದಾರೆ. ಇದು ಕಾನೂನಾತ್ಮಕವಾಗಿ ಸರಿಯಲ್ಲ.”

ಮಾನ್ಯ ಕರ್ನಾಟಕ ಹೈಕೋರ್ಟ್ 10 ಅಕ್ಟೋಬರ್ 2025 ರಂದು ನೀಡಿದ ತಾತ್ಕಾಲಿಕ ಆದೇಶದ ಪ್ರಕಾರ, ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಬಾರದು ಎಂದು ತಡೆ ನೀಡಿದೆ ಎಂಬ ಮಾಹಿತಿ ಪತ್ರಿಕಾ ವರದಿಗಳ ಮೂಲಕ ಮಾತ್ರ ಲಭ್ಯವಾಗಿದೆ. ಆದರೆ, ಆ ವರದಿಗಳಲ್ಲಿ ಸದಸ್ಯರ ಅವಧಿ ವಿಸ್ತಾರವಾಗಿದೆ ಎಂಬ ಯಾವುದೇ ಅಧಿಕೃತ ಮಾಹಿತಿ ಉಲ್ಲೇಖವಾಗಿಲ್ಲ. ಇದೇ ಕಾರಣದಿಂದ ಪುರಸಭೆಯ ಆಡಳಿತದ ಕುರಿತು ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿದೆ ಎಂದು ಸಂಜೀವ ನಾಯ್ಕ ಅವರು ಹೇಳಿದರು.
ಅವರು ತಮ್ಮ ಮನವಿಯಲ್ಲಿ ಕರ್ನಾಟಕ ಪುರಸಭೆ ಕಾಯ್ದೆ, 1964ರ ಧಾರಾ 48(1) ಮತ್ತು ಭಾರತೀಯ ನ್ಯಾಯ ಸಂಹಿತೆ (BNS), 2023ರ ಧಾರಾ 353(2) ಹಾಗೂ 355(1) ಉಲ್ಲೇಖಿಸಿ
“ಮಂಡಳಿಯ ಅವಧಿ ಮುಗಿದ ಬಳಿಕ ನಿತ್ಯ ಕಾರ್ಯದ ನಿರ್ವಹಣೆಯ ಅಧಿಕಾರ ಮುಖ್ಯಾಧಿಕಾರಿಯವರಲ್ಲಿಯೇ ಇರುತ್ತದೆ. ಸದಸ್ಯರು ಸಭೆ ನಡೆಸುವುದು ಅಥವಾ ಪತ್ರಿಕಾ ಪ್ರಕಟಣೆ ನೀಡುವುದು ಕಾನೂನಾತ್ಮಕವಾಗಿ ಪ್ರಶ್ನಾರ್ಹ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರು ಜಿಲ್ಲಾಡಳಿತದಿಂದ ಈ ಕೆಳಗಿನ ಪ್ರಮುಖ ವಿಷಯಗಳಲ್ಲಿ ಸ್ಪಷ್ಟನೆ ನೀಡುವಂತೆ ವಿನಂತಿಸಿದ್ದಾರೆ:
1️⃣ ಹೈಕೋರ್ಟ್ ಆದೇಶದ ವ್ಯಾಪ್ತಿ – ಅದು ಸದಸ್ಯರ ಅವಧಿ ವಿಸ್ತಾರವನ್ನೂ ಒಳಗೊಂಡಿದೆಯೇ ಅಥವಾ ಕೇವಲ ಆಡಳಿತಾಧಿಕಾರಿ ನೇಮಕ ತಡೆಯಾಗಿದೆಯೋ?
2️⃣ ಅಂಕೋಲಾ ಪುರಸಭೆ ಚುನಾಯಿತ ಸದಸ್ಯರ ಅವಧಿ ಮುಗಿದ ಸದಸ್ಯರು ಸಭೆ ನಡೆಸುವುದು ಕಾನೂನಾತ್ಮಕವಾಗಿದೆಯೇ?
3️⃣ ಪ್ರಸ್ತುತ ಪುರಸಭೆಯ ನಿತ್ಯ ಆಡಳಿತದ ಅಧಿಕಾರ ಯಾರ ಕೈಯಲ್ಲಿದೆ?

ಸಂಜೀವ ನಾಯ್ಕ ಅವರು ಹೇಳಿದರು “ಹೈಕೋರ್ಟ್ ಆದೇಶವನ್ನು ತಪ್ಪು ಗ್ರಹಿಸಿ ಜನರಲ್ಲಿ ಗೊಂದಲ ಉಂಟಾಗಿದೆ. ಅಂಕೋಲಾ ಪುರಸಭೆ ಚುನಾಯಿತ ಪ್ರತಿನಿಧಿಗಳ ಅವಧಿ ಮುಕ್ತಾಯ ವಾಗಿದೆ. ಚುನಾವಣೆ ಆಯೋಗ ಪಟ್ಟಿ ಮಾಡಿದೆ. ಅವಧಿ ಮುಕ್ತಾಯವಾದ ಚುನಾಯಿತ ಜನ ಪ್ರತಿನಿಧಿಗಳ ಬಗ್ಗೆ ಕಾನೂನು ಸ್ಪಷ್ಟನೆ ದೊರೆತರೆ ಆಡಳಿತ ಕ್ರಮವು ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಜನತೆಗೆ ಸ್ಪಷ್ಟ ಮಾಹಿತಿ ದೊರೆತರೆ ಅನಾವಶ್ಯಕ ರಾಜಕೀಯ ಒತ್ತಡ ತಪ್ಪುತ್ತದೆ.”
ಅಂಕೋಲಾ ತಹಶೀಲ್ದಾರ ಚಿಕಪ್ಪ ನಾಯಕ್ ಅರ್ಜಿಯನ್ನು ಸ್ವೀಕರಿಸಿದ್ದು ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ಕಳುಹಿಸಲಾಗುವದು ಎಂದಿದ್ದಾರೆ.
ಈ ಹಿಂದಿನ ದಿನಗಳಲ್ಲಿ ಪುರಸಭೆ ಮುಖ್ಯಧಿಕಾರಿ ಹೆಚ್ ಅಕ್ಷತಾ ಇವರ ಮೇಲೆ ಪೌರಾಡಳಿತ ಇಲಾಖೆಯಿಂದ ಅಮಾನತ್ತು ಸಹಿತ ವರ್ಗಾವಣೆ ಆಗಿತ್ತು. ಸದ್ರಿ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ಬಂದ ಬಳಿಕ ಹೆಚ್. ಅಕ್ಷತಾ ಅಂಕೋಲಾ ಪುರಸಭೆ ಯಲ್ಲಿ ಅಧಿಕಾರ ನಿರ್ವಹಿಸುವ ಅಧಿಕಾರವನ್ನು ಹೊಂದಿದ್ದರು.
ಹೆಚ್. ಅಕ್ಷತಾ ಅವರನ್ನು ಅಂಕೋಲಾ ಪುರಸಭೆಯಲ್ಲಿ ಮುಂದುವರಿಸಿದ್ದೇ ಆದಲ್ಲಿ ಕೆಲವು ಜನಪ್ರತಿನಿಧಿಗಳು ತಾವೆಲ್ಲರು ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನೀಡಿದ್ದು ವರದಿಯಾಗಿತ್ತು. ಆದರೆ ಪುರಸಭೆ ಜನಪ್ರತಿನಿಧಿ ಗಳ ಅವದಿ 12ಅಕ್ಟೋಬರ್ 2025ಕ್ಕೆ ಮುಗಿದಿದೆ ಎಂದು ಚುನಾವಣಾ ಆಯೋಗ ಪಟ್ಟಿ ಮಾಡಿದ್ದು. ಪುರಸಭೆ ಜನಪ್ರತಿನಿಧಿಗಳ ಅಧಿಕಾರಾವಧಿಯು ಪೂರ್ಣಗೊಂಡಿರುವ ಹಿನ್ನೆಲೆ, ಈ ಹೇಳಿಕೆ ಕಾನೂನಾತ್ಮಕವಾಗಿ ಎಷ್ಟು ತೂಕ ಹೊಂದಿದೆ ಎಂಬುದು ಈಗ ಪ್ರಶ್ನೆಯಾಗಿದೆ. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳ ಅಧಿಕೃತ ಸ್ಪಷ್ಟನೆ ಬರುವವರೆಗೂ ಪುರಸಭೆಯ ಆಡಳಿತದ ನಿಲುವು ನಿರ್ಣಾಯಕ ಹಂತದಲ್ಲಿದೆ.

