ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರ ಕಳವಳ – ಅಂಕೋಲಾದಲ್ಲಿ ನಾಯಿಗಳ ಹಾವಳಿಗೆ ತಡೆಗಟ್ಟುವ ಕ್ರಮವೇನು?

News Desk
2 Min Read

ಅಂಕೋಲಾ: ಪಟ್ಟಣದ ಹಲವು ಬೀದಿಗಳಲ್ಲಿ ಅಲೆದಾಡುವ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಹಗಲಿನ ಹೊತ್ತಲ್ಲಿಯೇ ಶಾಲೆಗೆ ಹೋಗುವ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಬಹುದೆಂಬ ಭಯ ಪೋಷಕರಲ್ಲಿ ಹೆಚ್ಚಾಗಿದೆ. ಇತ್ತೀಚೆಗೆ ಪುರಸಭೆ ವ್ಯಾಪ್ತಿಯ ವಂದಿಗೆಯಲ್ಲಿ ನಡೆದ ನಾಯಿಗಳ ದಾಳಿಯಲ್ಲಿ ಹಲವರು ಗಾಯಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ.

ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಬೈಕ್ ಮೇಲೆ ಹೋಗುವಾಗ ನಾಯಿಗಳು ಮೈಮೇಲೆ ಬಂದು ಅಟ್ಟಾಡಿದ ಘಟನೆಗೆ ತಾವು ಒಳಗಾದ ವಿಚಾರವನ್ನು ಉಲ್ಲೇಖಿಸಿದ್ದಾರೆ. ಪಟ್ಟಣದ ಪ್ರಮುಖ ದಾರಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಗಲಿನಲ್ಲಿ ಮಕ್ಕಳೇ ಗುರಿಯಾಗಿದ್ರೆ ಅಪಾಯ ತಪ್ಪದು ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್‌ಗೆ ಅನೇಕ ಸಾರ್ವಜನಿಕರು ಪ್ರತಿಕ್ರಿಯಿಸಿ, ನಾಯಿಗಳ ನಿಯಂತ್ರಣಕ್ಕಾಗಿ ಪುರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಹಿಂದಿನ ದಿನಗಳಲ್ಲಿ ಪುರಸಭೆ ಬೀದಿ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದರೂ, ಪ್ರಸ್ತುತ ನಿಯಮಗಳ ಪ್ರಕಾರ ನಾಯಿಗಳನ್ನು ಸಂಪೂರ್ಣವಾಗಿ ಬೀದಿಯಿಂದ ತೆಗೆದುಹಾಕಲು ಅವಕಾಶವಿಲ್ಲ. ಪ್ರಾಣಿಗಳ ಜನನ ನಿಯಂತ್ರಣ ಹಾಗೂ ಲಸಿಕೆ ಕಾರ್ಯಕ್ರಮದಡಿ ನಾಯಿಗಳನ್ನು ಹಿಡಿದು, ಶಸ್ತ್ರಚಿಕಿತ್ಸೆ ಮಾಡಿ, ಲಸಿಕೆ ಹಾಕಿ, ಮತ್ತೆ ಅದೇ ಪ್ರದೇಶಕ್ಕೆ ಬಿಟ್ಟುಬಿಡುವುದು ಕಡ್ಡಾಯವಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ದೆಹಲಿ–ಎನ್‌ಸಿಆರ್ ಪ್ರದೇಶಕ್ಕೆ ಮಾತ್ರ ಅನ್ವಯ ವಾಗುವಂತೆ ನೀಡಿದ ಆದೇಶದಲ್ಲಿ, ನಾಯಿಗಳನ್ನು ಬೀದಿಗಳಲ್ಲಿ ಬಿಡದೆ ಆಶ್ರಯ ಕೇಂದ್ರಗಳಲ್ಲಿ ಇರಿಸಬೇಕೆಂದು ಸೂಚಿಸಿದೆ. ಈ ಆದೇಶ ಕರ್ನಾಟಕಕ್ಕೆ ಅನ್ವಯವಾಗದಿದ್ದರೂ, ಅಂಕೋಲಾದಲ್ಲಿ ಹೆಚ್ಚುತ್ತಿರುವ ನಾಯಿಗಳ ಹಾವಳಿಯನ್ನು ಗಮನಿಸಿ, ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸ್ಥಳೀಯರು ಶಾಲಾ–ಕಾಲೇಜುಗಳ ಸುತ್ತಮುತ್ತ ಬೀದಿಬದಿ ನಾಯಿಗಳನ್ನು ನಿಯಂತ್ರಿಸುವುದು, ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಹಮ್ಮಿಕೊಳ್ಳುವುದು, ತುರ್ತು ಸಹಾಯವಾಣಿ ಸಂಖ್ಯೆ ಒದಗಿಸುವುದು ಹಾಗೂ ಮಕ್ಕಳಿಗೆ ನಾಯಿಗಳಿಂದ ಹೇಗೆ ದೂರವಿರಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯರ ಅಭಿಪ್ರಾಯ“ನಾಯಿಗಳ ದಾಳಿಯಿಂದ ಮಕ್ಕಳು ಶಾಲೆಗೆ ಹೋಗುವುದಕ್ಕೂ ಹೆದರುತ್ತಿದ್ದಾರೆ. ಪುರಸಭೆ ತಕ್ಷಣ ಕ್ರಮ ಕೈಗೊಂಡರೆ ಮಾತ್ರ ನಮ್ಮ ಮಕ್ಕಳು ಸುರಕ್ಷಿತರಾಗುತ್ತಾರೆ” ಎಂದು ಒಬ್ಬ ಪೋಷಕರು ತಮ್ಮ ಆತಂಕ ವ್ಯಕ್ತಪಡಿಸಿದರು.

Share This Article