ಹಣ ಹಾಗೂ ಒಡವೆಗಳಿಗಾಗಿ ವೃದ್ಧೆಯೊಬ್ಬರ ಮನೆಯ ಮಾಡು ಒಡೆದು ಒಳನುಗ್ಗಿ, ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗೆ ಕಾರವಾರ ಪೀಠಾಸೀನ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮದ ಕೆಳಗಿನಕೇರಿ ನಿವಾಸಿ, ಕೂಲಿ ಕಾರ್ಮಿಕ ಅಭಿಜಿತ ಗಣಪತಿ ಮಡಿವಾಳ (30) ಶಿಕ್ಷೆಗೊಳಗಾದ ಆರೋಪಿ.
ಘಟನೆಯ ಹಿನ್ನೆಲೆ: 2024ರ ಡಿಸೆಂಬರ್ 23ರಂದು ರಾತ್ರಿ 10:15ರ ಸುಮಾರಿಗೆ ಸಿದ್ದಾಪುರ ಪಟ್ಟಣದ ಬಸವನಗಲ್ಲಿಯ ನಿವಾಸಿ ಗೀತಾ ಪ್ರಭಾಕರ ಹುಂಡೇಕರ (72) ಅವರ ಮನೆಯ ಹಿಂಭಾಗದ ಹಂಚು ತೆಗೆದು ಒಳನುಗ್ಗಿದ್ದ ಆರೋಪಿ ಅಭಿಜಿತ, ವೃದ್ಧೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದನು. ಬಳಿಕ ಅವರು ಧರಿಸಿದ್ದ 1 ಜೊತೆ ಬಂಗಾರದ ಕಿವಿಯೋಲೆ, 3 ರೋಲ್ಡ್‌ಗೋಲ್ಡ್ ಬಳೆಗಳು ಹಾಗೂ ಪಿಗ್ಮಿ ಸಂಗ್ರಹದ 21,680 ರೂ. ನಗದನ್ನು ದೋಚಿ ಪರಾರಿಯಾಗಿದ್ದನು.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಸಿದ್ದಾಪುರ ಪೊಲೀಸ್ ನಿರೀಕ್ಷಕ ಜಿ.ಬಿ. ಸೀತಾರಾಮ ಅವರು ಪೂರ್ಣ ಪ್ರಮಾಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ (ಎಸ್.ಸಿ.ನಂಬರ್: 5027/2025) ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀ ಕಿರಣ ಕೇಣಿ ಅವರು, ಫೆಬ್ರವರಿ 18ರಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ‘ಭಾರತೀಯ ನ್ಯಾಯ ಸಂಹಿತೆ-2023’ರ ಕಲಂ 103(1) ಮತ್ತು 332ರ ಅಡಿಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 32,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದ ಜೊತೆಗೆ ಮೃತ ವೃದ್ಧೆಯ ಅವಲಂಬಿತ ಮಕ್ಕಳಿಗೆ 50,000 ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀ ರಾಜೇಶ ಎಂ. ಮಳಗಿಕರ್ ಸಮರ್ಥವಾಗಿ ವಾದ ಮಂಡಿಸಿದ್ದರು. ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಿಪಿಐ ಜಿ.ಬಿ. ಸೀತಾರಾಮ, ಎ.ಹೆಚ್.ಸಿ ಸಂತೋಷ ಜಿ. ತಳವಾರ, ಎ.ಎಸ್.ಐ ಗಣಪತಿ ಸಿ. ಬಂಟ್ ಹಾಗೂ ಅಭಿಯೋಜಕರ ಕಾರ್ಯಕ್ಷಮತೆಯನ್ನು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಶ್ಲಾಘಿಸಿದೆ.
ವಿಕಾಸ ವಾಹಿನಿ ವರದಿ
…………………………..


