ಅಂಕೋಲಾ, ಜುಲೈ 19: ಅಂಕೋಲಾ ಪುರಸಭೆ ವ್ಯಾಪ್ತಿಯ ಕೋಟೆವಾಡದ ಬಳಿ ಇರುವ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಪ್ರಸ್ತುತ ಸಾರ್ವಜನಿಕ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಸ್ಮಶಾನದ ಸುತ್ತಲಿದ್ದ ಹಳೆ ಕಲ್ಲಿನ ಕಾಂಪೌಂಡ್ ಕಳೆದ ಅಂದಾಜು 2 ತಿಂಗಳ ಹಿಂದೆ ತೆರವುಗೊಳಿಸಲಾಗಿದೆ. ಆದರೆ, ಹೊಸ ಕಾಂಪೌಂಡ್ ನಿರ್ಮಾಣ ಕಾರ್ಯ ಆರಂಭವಾದರೂ ಮಧ್ಯದಲ್ಲಿ ನಿಲ್ಲಿಸಿದ್ದು, ಇತ್ತೀಚೆಗೆ ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಸ್ಮಶಾನವು ಮುಖ್ಯ ರಸ್ತೆ ಪಕ್ಕದಲ್ಲಿರುವ ಕಾರಣ ನೂರಾರು ಮಕ್ಕಳು, ವಯೋವೃದ್ಧರು ಈ ದಾರಿಯಿಂದ ಪ್ರತಿದಿನ ಸಂಚರಿಸುತ್ತಿದ್ದಾರೆ. ಹಳೆಯ ಕಾಂಪೌಂಡ್ ಬಾಗಿದ ಸ್ಥಿತಿಯಲ್ಲಿದ್ದು ಬಿದ್ದುಹೋಗುವ ಅಪಾಯ ಕಂಡು ಕಳೆದ ಎರಡು ತಿಂಗಳ ಹಿಂದೆ ಕ್ರಿಶ್ಚಿಯನ್ ಸಮುದಾಯದವರು ಜವಾಬ್ದಾರಿಯುತವಾಗಿ ಅದನ್ನು ತೆರವುಗೊಳಿಸಿದ್ದರು. ನಂತರ ಹೊಸ ಕಾಂಪೌಂಡ್ ಕಟ್ಟಲು ಅಂದೇ ತಳಪಾಯ ತೋಡಲಾಗಿತ್ತು ಹಾಗೂ ಕೆಂಪು ಚೀರೆಕಲ್ಲು ತಂದು ದಾಸ್ತಾನು ಮಾಡಲಾಯಿತು. ಆದರೆ, ಅದು ಅಷ್ಟೇ — ನಂತರ ಯಾವುದೇ ನಿರ್ಮಾಣ ಕಾರ್ಯ ಮುಂದುವರಿದಿಲ್ಲ.
ಸ್ಥಳೀಯರ ಆತಂಕ : ತೆರೆದ ಸ್ಮಶಾನದಿಂದ ಮಕ್ಕಳು ಭಯಗೊಂಡು ಹೋಗುತ್ತಿದ್ದಾರೆ. ತಳಪಾಯ ತೆಗೆಯಲಾಗಿರುವ ಸ್ಥಳ ಸಾರ್ವಜನಿಕರ ಓಡಾಟದ ದಾರಿಯ ಹತ್ತಿರವಿರುವುದರಿಂದ ಅಪಾಯದ ಪರಿಸ್ಥಿತಿ ಉಂಟಾಗಿದೆ.
ಕಾಮಗಾರಿಯಲ್ಲಿ ನಿರ್ಲಕ್ಷ್ಯ: ಎರಡು ತಿಂಗಳ ಹಿಂದೆ ಕಂಪೌಂಡ್ ತೆರವುಗೊಳಿಸಿ ಹೊಸದನ್ನು ಕಟ್ಟುವ ಪ್ರಕ್ರಿಯೆ ಆರಂಭಿಸಿದ್ದರೂ, ಅದನ್ನು ಪೂರೈಸದೆ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಎಷ್ಟೇ ಆದರೂ ಸ್ಮಶಾನವಾದ್ದರಿಂದ ಜನರಲ್ಲಿ ಭೀತಿಯಂತು ಸಹಜ,” ಎನ್ನುತ್ತಾರೆ ಸ್ಥಳೀಯರು.
ಸಾರ್ವಜನಿಕರ ಬೇಡಿಕೆ: ಅಂಕೋಲಾ ಪುರಸಭೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ವ್ಯಕ್ತಿಗಳಿಗೆ ತಾಕೀತು ಮಾಡಬೇಕು ಹಾಗೂ ಸ್ಮಶಾನದ ಕಾಂಪೌಂಡ್ ಶೀಘ್ರದಲ್ಲಿ ನಿರ್ಮಾಣ ವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳೀಯರು ಹಲವು ಬಾರಿ ಸ್ಮಶಾನಕ್ಕೆ ಸಂಬಂಧಪಟ್ಟ ಕ್ರಿಶ್ಚಿಯನ್ ಸಮುದಾಯ ದವರಿಗೆ ತಿಳಿಸಿದ್ದು . ಕಾಂಪೌಂಡ್ ಕಟ್ಟಲು ನಿರಾಶಕ್ತಿ ತೋರಿಸಿರುವ ಕಾರಣ ಅಲ್ಲಿನ ಸ್ಥಳಿಯ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ್

