ಅಂಕೋಲಾ ಪುರಸಭೆ: ಹೈಕೋರ್ಟ್ ಮತ್ತೊಮ್ಮೆ ಎಚ್. ಅಕ್ಷತಾ ಪರ — ಹೋರಾಟದಿಂದ ಗೆದ್ದ ಮುಖ್ಯಾಧಿಕಾರಿ, ಅಮಾನತ್ತು ಆದೇಶಕ್ಕೆ ತಾತ್ಕಾಲಿಕ ತಡೆ..

News Desk
2 Min Read

ಅಂಕೋಲಾ: ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರು ಮತ್ತೆ ನ್ಯಾಯಾಂಗದ ಕಣಕ್ಕಿಳಿದು ತಮ್ಮ ಅವಿರತ ಹೋರಾಟ ಮತ್ತು ಧೈರ್ಯದಿಂದ ಪೌರಾಡಳಿತ ಇಲಾಖೆಯ ಕ್ರಮಕ್ಕೆ ತಾತ್ಕಾಲಿಕ ತಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಇಲಾಖೆಯು ಹೊರಡಿಸಿದ್ದ 13 ಅಕ್ಟೋಬರ್ 2025ರ ಅಮಾನತ್ತು ಮತ್ತು ವರ್ಗಾವಣೆ ಆದೇಶ ಇದೀಗ ಹೈಕೋರ್ಟ್ ಧಾರವಾಡ ಪೀಠದ ಮಾ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಾಸನದಿಂದ 17 ಅಕ್ಟೋಬರ್ 2025ರಂದು ಆದೇಶ ವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಅಂಕೋಲಾ ಪುರಸಭೆಯ ಒಳಾಂಗಣದಲ್ಲಿ ರಾಜಕೀಯ ಒತ್ತಡಗಳು ಮತ್ತು ಆಡಳಿತಾತ್ಮಕ ತೀವ್ರತೆಗಳು ಹೆಚ್ಚಾಗಿದ್ದವು. ಕೆಲವು ಚುನಾಯಿತ ಪ್ರತಿನಿಧಿಗಳು ಎಚ್. ಅಕ್ಷತಾ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಹಾಗೂ ಪೌರಾಡಳಿತ ಇಲಾಖೆಗೆ ನಿರಂತರವಾಗಿ ದೂರುಗಳನ್ನು ಸಲ್ಲಿಸುತ್ತಿದ್ದರು. ಅವರ ಕಾರ್ಯಪದ್ಧತಿಯನ್ನು ಪ್ರಶ್ನಿಸಿ ಹಲವು ಬಾರಿ ತನಿಖೆಗಾಗಿ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಹೊರಬಿದ್ದ ಅಮಾನತ್ತು ಆದೇಶವು ಅಕ್ಷತಾ ವಿರೋಧಿ ವಲಯಕ್ಕೆ ಸಿಹಿ ತಂದಂತಾಗಿತ್ತು. ಆದರೆ, ಕೇವಲ ಕೆಲವು ದಿನಗಳಲ್ಲೇ ಎಚ್. ಅಕ್ಷತಾ ತಮ್ಮ ಧೈರ್ಯ, ಕಾನೂನಾತ್ಮಕ ನಂಬಿಕೆ ಮತ್ತು ಅಚಲ ಮನೋಬಲದಿಂದ ಮತ್ತೆ ನ್ಯಾಯಾಲಯದ ಬಾಗಿಲು ತಟ್ಟಿದರು – ಮತ್ತು ನ್ಯಾಯಾಂಗವು ಅವರ ಪರವಾಗಿ ನಿಂತಿದೆ.

WP No.107630/2025 ರಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ — ಇಲಾಖೆಯು ನೀಡಿದ ಕಾರಣ ತೋರಿಸಿ ಪತ್ರಕ್ಕೆ ಅಕ್ಷತಾ ನೀಡಿದ ಉತ್ತರವನ್ನು ಪರಿಗಣಿಸದೆ ಅಮಾನತ್ತು ಆದೇಶ ಹೊರಡಿಸಿರುವುದು ಪ್ರಕ್ರಿಯಾತ್ಮಕ ದೋಷ. ಇದು ನ್ಯಾಯಸಮ್ಮತ ವಿಧಾನವಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಅದನ್ನು ಆಧರಿಸಿ ಅಮಾನತ್ತು ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಹೀಗೆ, ಹೈಕೋರ್ಟ್‌ನ 17/10/2025ರ ಆದೇಶದಿಂದ ಎಚ್. ಅಕ್ಷತಾ ಅವರಿಗೆ ತಮ್ಮ ಹುದ್ದೆ ನಿರ್ವಹಣೆಗೆ ಪುನಃ ಕಾನೂನಾತ್ಮಕ ಹಕ್ಕು ಸಿಕ್ಕಿದೆ. ಮುಂದಿನ ವಿಚಾರಣೆ ನಡೆಯುವವರೆಗೂ ಅವರು ಅಧಿಕಾರ ನಿರ್ವಹಿಸಲು ಹಕ್ಕು ಹೊಂದಿದ್ದಾರೆ ಎಂದು ಕಾನೂನಾತ್ಮಕವಾಗಿ ಅರ್ಥವಾಗುತ್ತದೆ.

ಅಂಕೋಲಾ ಪುರಸಭೆಯೊಳಗೆ ಈಗ ಹೊಸ ಚರ್ಚೆಯ ಅಲೆ ಎದ್ದಿದೆ. ಕೆಲವರು “ಇದು ಅಕ್ಷತಾ ಅವರ ಆಡಳಿತದ ನಿರ್ಧಾರಾತ್ಮಕ ಶೈಲಿಗೆ ನ್ಯಾಯಾಂಗದಿಂದ ದೊರೆತ ಪ್ರತಿಫಲ” ಎಂದು ಹೇಳುತ್ತಿದ್ದರೆ, ಮತ್ತೊಂದು ವಲಯ ಇದನ್ನು ಇಲಾಖೆಯ ವೈಫಲ್ಯವೆಂದು ವಿಶ್ಲೇಷಿಸುತ್ತಿದೆ. ಎಚ್. ಅಕ್ಷತಾ. ಅವರು ಈಗಾಗಲೇ ವರ್ಗಾವಣೆಯ ವಿಷಯ ದಲ್ಲಿಯೂ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ ಪಡೆದಿದ್ದರು. ಈಗ ಅಮಾನತ್ತಿನ ಮೇಲೂ ಅದೇ ರೀತಿಯ ತಡೆ ದೊರಕಿರುವುದರಿಂದ, ಅವರು ಹೋರಾಟಗಾರ್ತಿ ಅಧಿಕಾರಿಯಾಗಿ ತಮ್ಮ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ನ್ಯಾಯಾಂಗದ ನಂಬಿಕೆಯಿಂದ ಹೋರಾಡಿದ ಅವರ ಕ್ರಮವು ಅನೇಕ ಅಧಿಕಾರಿಗಳಿಗೆ ಧೈರ್ಯ ತುಂಬಿ ದಂತಾಗಿದೆ.

“ನ್ಯಾಯಾಂಗದ ಎದುರು ನಿಲ್ಲುವುದೇ ದೊಡ್ಡ ಹೋರಾಟ — ಆದರೆ ಸತ್ಯ ನನ್ನ ಪರವಿತ್ತು, ಅದು ನನ್ನನ್ನು ಮತ್ತೆ ಕಚೇರಿಯತ್ತ ಕರೆದುಕೊಂಡುಬಂದಿದೆ” ಎಂದು ಎಚ್. ಅಕ್ಷತಾ ಹತ್ತಿರದ ವಲಯದಲ್ಲಿ ಪ್ರತಿಕ್ರಿಯಿಸಿದರೆಂಬ ಮಾಹಿತಿ ದೊರಕಿದೆ.

ಪ್ರಸ್ತುತ, ಪೌರಾಡಳಿತ ಇಲಾಖೆಯು ಯೇಸು ಸುಬ್ಬಣ್ಣ ಬೆಂಗಳೂರು ರವರಿಗೆ ನೀಡಿದ್ದ ಪ್ರಭಾರಿ ನೇಮಕ ತಾತ್ಕಾಲಿಕವಾಗಿಯೇ ಉಳಿಯಲಿದೆ. ಆದರೆ ಹೈಕೋರ್ಟ್‌ನ ಮುಂದಿನ ತೀರ್ಪು ಅಕ್ಷತಾ ಅವರ ಭವಿಷ್ಯ ಹಾಗೂ ಅಂಕೋಲಾ ಪುರಸಭೆಯ ಆಡಳಿತದ ದಿಕ್ಕನ್ನು ನಿರ್ಧರಿಸಲಿದೆ.

Share This Article