ಅಂಕೋಲಾದಲ್ಲಿ ‘ಸ್ವಚ್ಛತೆಯೇ ಸೇವೆ 2025’ ಸ್ವಚ್ಛೋತ್ಸವಕ್ಕೆ ಚಾಲನೆ: ಸ್ವಚ್ಛ ನಗರ ನಿರ್ಮಾಣಕ್ಕೆ ಪುರಸಭೆ ಪಣ

News Desk
1 Min Read

ಅಂಕೋಲಾ, ಸೆಪ್ಟೆಂಬರ್ 18: “ಕಸ ಮುಕ್ತ ಭಾರತ” ನಿರ್ಮಾಣದ ಗುರಿಯೊಂದಿಗೆ ಆಯೋಜಿಸಲಾಗಿರುವ “ಸ್ವಚ್ಛತೆಯೇ ಸೇವೆ 2025” ಆಂದೋಲನಕ್ಕೆ ಅಂಕೋಲಾ ಪಟ್ಟಣದಲ್ಲಿ ನಿನ್ನೆ (ಸೆಪ್ಟೆಂಬರ್ 17) ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಅಂಕೋಲಾ ಪುರಸಭೆಯ ನೇತೃತ್ವದಲ್ಲಿ “ಸ್ವಚ್ಛೋತ್ಸವ” ಎಂಬ ಹೆಸರಿನಲ್ಲಿ ಈ ಅಭಿಯಾನವನ್ನು ಅಕ್ಟೋಬರ್ 2ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಪಟ್ಟಣವನ್ನು ಸಂಪೂರ್ಣ ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಯಾದ ಎಚ್ .ಅಕ್ಷತಾ ಸದಸ್ಯರುಗಳಾದ ಪ್ರಕಾಶ್ ಗೌಡ, ಕಾರ್ತಿಕ್ ನಾಯ್ಕ, ಮಂಜುನಾಥ್ ನಾಯ್ಕ ಹಾಗೂ ಪುರಸಭೆಯ ಸಮಸ್ತ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಮಾದರಿಯಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮುಖ್ಯ ಅಧಿಕಾರಿ “ಸ್ವಚ್ಛತೆ ಎಂಬುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಕೇವಲ ಪುರಸಭೆ ಸಿಬ್ಬಂದಿ ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ ಪ್ರತಿದಿನ ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ನಮ್ಮ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಡಲು ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಅಭಿಯಾನದ ಮೊದಲ ದಿನದಂದು ಪುರಸಭೆಯ ಅಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಪಟ್ಟಣದ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಗುಡಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.

Share This Article