ಅಂಕೋಲಾ: ಪುರಸಭೆ ವ್ಯಾಪ್ತಿಯ ಅಜ್ಜಿಕಟ್ಟಾದಲ್ಲಿ ಸುಮಾರು ₹4 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಕಬ್ಬಿಣದ ಪೈಪ್ ಹಾಗೂ ಶೀಟ್ಗಳನ್ನು ಬಳಸಿ ಅಚ್ಚುಕಟ್ಟಾಗಿ ಮಾಡಿರುವ ಈ ಶೆಡ್ ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ಆದರೆ ಇದರ ಮೇಲ್ಭಾಗದಲ್ಲಿ “ಅಜ್ಜಿಕಟ್ಟಾ ಬಸ್ ನಿಲ್ದಾಣ” ಎಂದು ಬರೆದು ಹಾಕಿರುವುದು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿತ್ತು.
ವಾಸ್ತವದಲ್ಲಿ ಪ್ರಯಾಣಿಕರಿಗೋಸ್ಕರ ಅಜ್ಜಿಕಟ್ಟದಲ್ಲಿ ಶೆಡ್ ನಿರ್ಮಿಸಿರುವ ಜಾಗದಲ್ಲಿ ಸಾರಿಗೆ ಬಸ್ಸುಗಳು ನಿಲ್ಲುತ್ತಿಲ್ಲ. ಬಸ್ಸುಗಳು ಈಗ ನಿರ್ಮಿಸಿರುವ ಶೆಡ್ನಿಂದ ಸ್ವಲ್ಪ ದೂರದಲ್ಲಿರುವ ಹಳೆಯ ಸ್ಥಳದಲ್ಲೇ ನಿಲ್ಲುತ್ತಿವೆ. ಇದರಿಂದಾಗಿ “ಶೆಡ್ ಕಟ್ಟಿದ್ದು ಏಕೆ?” ಎಂಬ ಪ್ರಶ್ನೆ ಸ್ಥಳೀಯರ ನಡುವೆ ಕೇಳಿಬರುತ್ತಿದೆ.

ಈ ಕುರಿತು ಅಂಕೋಲಾ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ ಅವರು ಸ್ಪಷ್ಟನೆ ನೀಡುತ್ತಾ,
“ಅಜ್ಜಿಕಟ್ಟಾದಲ್ಲಿ ಬಸ್ ನಿಲ್ದಾಣ ಎಂಬುದು ನಮ್ಮ ಗಮನಕ್ಕೇ ಬಂದಿಲ್ಲ. ಪುರಸಭೆಯಿಂದ ಮಾಹಿತಿ ನೀಡಲಾಗಿಲ್ಲ. ಬಸ್ ನಿಲುಗಡೆ ಸ್ಥಳವನ್ನು ಬದಲಾಯಿಸಲು ನಮ್ಮ ಮೇಲಾಧಿಕಾರಿಗಳ ಪರಿಶೀಲನೆ ಮತ್ತು ಆದೇಶ ಅಗತ್ಯ. ಆದೇಶ ಬಾರದ ಕಾರಣದಿಂದ ಬಸ್ಸುಗಳು ಹಳೆಯ ಸ್ಥಳದಲ್ಲೇ ನಿಲ್ಲುತ್ತಿವೆ” ಎಂದು ತಿಳಿಸಿದರು.
ಹೀಗಾಗಿ, ಬಸ್ ನಿಲ್ಲದ ಜಾಗದಲ್ಲಿ ತಂಗುದಾಣ ನಿರ್ಮಿಸಿ ಅದನ್ನು “ಬಸ್ ನಿಲ್ದಾಣ” ಎಂದು ಹೆಸರಿಸಿರುವುದು ಪುರಸಭೆ ಇಂಜಿನಿಯರ್ ಮತ್ತು ಗುತ್ತಿಗೆದಾರರ ನಡುವಿನ ಸಮನ್ವಯದ ಕೊರತೆಯನ್ನು ಬಯಲಿಗೆಳೆದುದಾಗಿದೆ. ಈ ತಪ್ಪಿನ ಪರಿಣಾಮವಾಗಿ ಅಜ್ಜಿಕಟ್ಟಾ ಪುರಸಭಾ ಸದಸ್ಯನಿಗೂ “ತಾನು ಮಾಡದ ಕೆಲಸಕ್ಕೆ ಜನರ ಮುಂದೆ ಮುಜುಗರ” ಉಂಟಾಗಿದೆ ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲ, ಪುರಸಭೆ ವ್ಯಾಪ್ತಿಯ ಕೇಣಿಯಲ್ಲಿಯೂ ₹4 ಲಕ್ಷ ಅಂದಾಜಿನಲ್ಲಿ ತಂಗುದಾಣ ನಿರ್ಮಿಸಿ, ಅದನ್ನೂ “ಕೇಣಿ ಬಸ್ ನಿಲ್ದಾಣ” ಎಂದು ಬರೆದು ಹಾಕಲಾಗಿದೆ.
ಇದೀಗ ಪುರಸಭೆಯ ಇಂಜಿನಿಯರ್ ಈ ವಿಷಯ ಗಮನಿಸಿ, “ಅಜ್ಜಿಕಟ್ಟಾ ಹಾಗೂ ಕೇಣಿಯಲ್ಲಿನ ಬೋರ್ಡ್ಗಳನ್ನು ಬದಲಿಸಿ ‘ತಂಗುದಾಣ’ ಎಂದು ತಿದ್ದುಪಡಿ ಮಾಡಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ..
ವರದಿ: ಕಿರಣ ಚಂದ್ರಹಾಸ ಗಾಂವಕರ್

