ಅಂಕೋಲಾ, ಜುಲೈ 16: ಅತೀ ಹಿಂದುಳಿದ ಹಾಗೂ ದುರ್ಬಲ ವರ್ಗದ ಮನೆ ಇಲ್ಲದ ಕುಟುಂಬಗಳಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸದಾಗಿ ಮಹತ್ವದ ನಿರ್ದೇಶನ ಹೊರಡಿಸಿದ್ದು, ಅಂಕೋಲಾ ಪುರಸಭೆ ವ್ಯಾಪ್ತಿಯ ಅನೇಕ ಬಡ ಕುಟುಂಬಗಳಿಗೆ ಇದು ನಿಜಕ್ಕೂ ಆಶಾಕಿರಣವಾಗಿದೆ.
ಬಿಟಿಪಿ ಮಾದರಿಯಲ್ಲಿ ಪ್ರಾಥಮಿಕ ಕಾರ್ಯಾಚರಣೆ: ರಾಜ್ಯ ಸರ್ಕಾರದ ಯೋಜನೆಯಂತೆ, ‘ಬಿಟಿಪಿ ಮಾದರಿ’ ಎಂಬ ತ್ವರಿತ ಕಾರ್ಯಚರಣೆ ರಚನೆಯಾಗಿದೆ. ಇದನ್ನು ಅನುಸರಿಸಿ ಮನೆ ಇಲ್ಲದ ಬಡ ಕುಟುಂಬಗಳನ್ನು ಪುರಸಭೆಗಳು ಸ್ಥಳದಲ್ಲೇ ಗುರುತಿಸಿ, ಅವರಿಗೆ ಬೇಕಾದ ದಾಖಲೆಗಳನ್ನು ಸಹಕಾರದಿಂದ ಒದಗಿಸಿ, ಮನೆ ಯೋಜನೆಗೆ ಅರ್ಹರಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಯಾರು ಲಾಭ ಪಡೆಯುತ್ತಾರೆ?
– ಅಲೆಮಾರಿ ಜನಾಂಗ,– ಬುಡಕಟ್ಟು ಸಮುದಾಯ,– ದೇವದಾಸಿ ಮಹಿಳೆಯರು,– ಅಂಗವಿಕಲರು,– HIV ಪೀಡಿತರು,– ವಿಧವೆ ಮಹಿಳೆಯರು,– Manual Scavengers ಇತ್ಯಾದಿ ವರ್ಗಗಳು.

ಅವಶ್ಯಕ ದಾಖಲೆಗಳು:
1. ಆಧಾರ್ ಸಂಖ್ಯೆ
2. ಪಡಿತರ ಚೀಟಿ ಸಂಖ್ಯೆ
3. ಜಾತಿ ಮತ್ತು ಆದಾಯ ಪ್ರಮಾಣಪತ್ರದ R.D. ಸಂಖ್ಯೆ
ಇದನ್ನು ಪೂರೈಸದ ಹಿನ್ನಲೆಯಲ್ಲಿ ಅನೇಕರು ಮನೆ ಯೋಜನೆಯಿಂದ ವಂಚಿತರಾಗುತ್ತಿದ್ದರು. ಈ ಸಮಸ್ಯೆ ನಿವಾರಣೆಗೆ ಇಲಾಖೆಗಳು ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂಬ ಸೂಚನೆ ಜಿಲ್ಲಾಧಿಕಾರಿಗಳ ನಗರಾಭಿವೃದ್ಧಿ ಕೋಶದಿಂದ ಬಂದಿದೆ.
ಅಂಕೋಲಾ ಪುರಸಭೆಗೂ ಸ್ಪಷ್ಟ ಆದೇಶ:
ಅಂಕೋಲಾ, ಕುಮಟಾ, ಭಟ್ಕಳ, ಹಳಿಯಾಳ ಸೇರಿದಂತೆ ಎಲ್ಲ ಪುರಸಭೆ ಮುಖ್ಯಾಧಿಕಾರಿಗಳಿಗೆ, ತಮ್ಮ ವ್ಯಾಪ್ತಿಯಲ್ಲಿ ಮನೆ ಇಲ್ಲದ ಬಡ ಕುಟುಂಬಗಳನ್ನು ತಕ್ಷಣ ಗುರುತಿಸಿ, ಈ ದಾಖಲೆಗಳನ್ನು ಕಲ್ಪಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಮನೆ ಯೋಜನೆಯ ಸದುಪಯೋಗ ಸಾಮಾನ್ಯ ಜನತೆಗೆ ಸಿಗುವಂತಾಗಲಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ

