ಅಂಕೋಲಾ ಪುರಸಭೆ: ಬಳ್ಳಾರಿಗೆ ಹೋಗಲಿಲ್ಲ ಮುಖ್ಯಾಧಿಕಾರಿ – ಹೈಕೋರ್ಟ್ ತಾತ್ಕಾಲಿಕ ತಡೆ..

News Desk
3 Min Read

ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಅಕ್ಷತಾ ಹೆಚ್ ಅವರನ್ನು ಜೂನ್ 30ರಂದು ನಗರಾಭಿವೃದ್ಧಿ ಇಲಾಖೆ ಬಳ್ಳಾರಿ ಮಹಾನಗರ ಪಾಲಿಕೆಗೆ ವರ್ಗಾಯಿಸಿ ಆದೇಶ ನೀಡಿತ್ತು. ಅದೇ ದಿನ ಅವರು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿ, ಜುಲೈ 4ರಂದು ತಾತ್ಕಾಲಿಕ ತಡೆಯಾಜ್ಞೆ ಪಡೆದುಕೊಂಡರು.

ಇದರ ಫಲವಾಗಿ, ಅವರು ಅಂಕೋಲಾ. ದಲ್ಲಿಯೇ ತಮ್ಮ ಹುದ್ದೆಯಲ್ಲಿ ಮುಂದು ವರಿಯಲು ಅವಕಾಶ ದೊರೆತಿದೆ. ನ್ಯಾಯಾಲಯದ ಆದೇಶದಂತೆ, ಸರ್ಕಾರದ ವರ್ಗಾವಣಾ ಆದೇಶವನ್ನು “ಮುಂದಿನ ಆದೇಶಗಳು ಬರುವವರೆಗೆ ಜಾರಿಗೊಳಿಸಬಾರದು” ಎಂದು ತಾತ್ಕಾಲಿಕ ತಡೆ ನೀಡಲಾಗಿದೆ. ಆದರೆ ಈ ತಡೆ ಯಾವವರೆಗೆ ಜಾರಿಯಲ್ಲಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ, ಏಕೆಂದರೆ ಮುಂದಿನ ವಿಚಾರಣಾ ದಿನಾಂಕ ಅಥವಾ ಅಂತಿಮ ತೀರ್ಪು ಇನ್ನೂ ಪ್ರಕಟವಾಗಿಲ್ಲ.

ಪುರಸಭೆಯಲ್ಲಿ ರಾಜಕೀಯದ ಪ್ರಭಾವ ಹೆಚ್ಚಾಗಿ, ಸದಸ್ಯರ ಅಸಮಾಧಾನ ಹೊಸ ತಿರುವು ಪಡೆದುಕೊಂಡಂತಾಗಿದೆ. 23 ಸದಸ್ಯರ ಪೈಕಿ 18 ಮಂದಿ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಳ್ಳಾರಿಗೆ ವರ್ಗಾವಣೆಯಾದಾಗ ಕೆಲವರಿಗೆ ಇದು ನಿರೀಕ್ಷಿತ ಬೆಳವಣಿಗೆಯಂತೆ ತೋರಿತ್ತಾದರೂ, ಹೈಕೋರ್ಟ್ ತಾತ್ಕಾಲಿಕ ತಡೆಯ ನಂತರ ಇದು “ಪ್ರತಿಷ್ಠೆಯ ಪ್ರಶ್ನೆ” ಎಂಬಂತೆ ಪರಿಸ್ಥಿತಿ ಬದಲಾಗಿದೆ ಎಂಬುದು ಸಾರ್ವಜನಿಕ ವಲಯದ ಮಾತು. ಆ ಮೂಲಕ, ನ್ಯಾಯಾಲಯದ ತೀರ್ಪು ಆಂತರಿಕ ರಾಜಕೀಯ ವ್ಯತ್ಯಾಸಕ್ಕೆ ಪೂರಕ ಪರಿಹಾರವಲ್ಲದೆ, ಇನ್ನೂ ಬಗೆಹರಿಯದ ಪ್ರಶ್ನೆಯಂತೆ ಉಳಿದಿದೆ. ಮೂಲಗಳಲ್ಲಿ ಲಭಿಸಿರುವ ಮಾಹಿತಿಯಂತೆ, ಅಧಿಕಾರಿಗೆ ಬಳ್ಳಾರಿಗೆ ತೆರಳಲು ಇಚ್ಛೆಯಾಗಿರಲಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಈ ಬೆಳವಣಿಗೆಯ ನಡುವೆ ಪುರಸಭೆಯ ಆಡಳಿತ ನಿರ್ಧಾರಾತ್ಮಕವಾಗಿ ಸ್ಥಗಿತ ಗೊಂಡಂತಾಗಿದೆ. ಸಭೆ ನಡೆಯದೆ, ಸದಸ್ಯರು ಗೈರಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲಾಗದಂತಾಗಿದೆ. ಅಧಿಕಾರಿಯು ಇದ್ದರೂ ಸಭೆಯ ಅನುಮತಿಯಿಲ್ಲದೆ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಾಧ್ಯತೆಯಿಲ್ಲ.

ಇದರಿಂದಾಗಿ ಕುಡಿಯುವ ನೀರು, ರಸ್ತೆ ದುರಸ್ತಿ, ಕಸದ ವಿಲೇವಾರಿ, ಬಡಾವಣಾ ಅಭಿವೃದ್ಧಿ ಯೋಜನೆಗಳಂತಹ ಮೂಲಭೂತ ಸೇವೆಗಳಿಗೂ ತಕ್ಷಣದ ಅಡಚಣೆ ಉಂಟಾಗಿದೆ. ಜನರ ಅನುಭವದಲ್ಲಿ ಇದು ಸರಳವಾಗಿ “ಸರಕಾರ ಇದ್ದರೂ ಕೆಲಸ ನಡೆಯದ ಸ್ಥಿತಿ”ಯಂತೆ ತೋರಿಸುತ್ತಿದೆ.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಅಕ್ಷತಾ ಹೆಚ್ ಅವರು, ವಿಕಾಸ ವಾಹಿನಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ನಾನು ಯಾವುದೇ ರಾಜಕೀಯ ಒತ್ತಡದಿಂದ ಅಥವಾ ಕಳಂಕದ ಭಯದಿಂದ ವರ್ಗಾವಣೆಯಾಗಲು ಒಪ್ಪಿಕೊಂಡಿಲ್ಲ. ನನ್ನ ವಿರುದ್ಧ ಅಪಾದನೆಗಳು ಇದ್ದರೂ ನಾನು ನನ್ನ ಹುದ್ದೆಗೆ ಸರಿಯಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಜನಪ್ರತಿನಿಧಿಗಳ ಬಗ್ಗೆ ನನಗೆ ಯಾವುದೇ ವೈಷಮ್ಯವಿಲ್ಲ. ನಾನು ಸಾರ್ವಜನಿಕ ಸೇವೆಯಲ್ಲಿ ಸತ್ಯನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಪುರಸಭೆಗೆ ಕೊಡುಗೆ ನೀಡುವ ಉದ್ದೇಶದಲ್ಲೇ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಹೈಕೋರ್ಟ್ ಮೊರೆ ಹೋಗಿದ್ದರೆಂದು ಅವರು ಸ್ಪಷ್ಟಪಡಿಸಿದ್ದಾರೆ.ಈ ಪರಿಸ್ಥಿತಿಯಲ್ಲಿ ಯಾರ ಹುದ್ದೆ ಉಳಿಯುವುದು ಅಥವಾ ಹೋಗುವುದು ಎನ್ನುವ ಪ್ರಶ್ನೆಯಲ್ಲ, ಜನಸಾಮಾನ್ಯರ ಜೀವನಕ್ಕೆ ಅಗತ್ಯವಾದ ಸೇವೆಗಳು ನಿಂತಿರುವುದು ಎಲ್ಲರಿಗೂ ಕಳವಳಕಾರಿ ವಿಷಯವಾಗಿದೆ.

ವಾರದ-ವಾರ ಕಳೆದರೂ ಸಭೆ ನಡೆಯ ದಿರುವುದರಿಂದ, ಪುರಸಭೆ ಸೂತಕದ ಛಾಯೆ ಆವರಿಸಿಕೊಂಡಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಧ್ಯಕ್ಷರ ಕೊಠಡಿಯ ಬಾಗಿಲು ದೀರ್ಘ ಕಾಲದಿಂದ ಬಿಕೋ ಎನ್ನುತ್ತಿರುವುದು, ಜನರನ್ನು ಪ್ರತಿನಿಧಿಸಲು ಆಯ್ಕೆಯಾದ ಜನಪ್ರತಿನಿಧಿಗಳ ಕಣ್ಮರೆಯು, ಸಾರ್ವಜನಿಕರಲ್ಲಿ ನಂಬಿಕೆ ಕೊರತೆ ಉಂಟುಮಾಡುತ್ತಿದೆ.

ಅಭಿವೃದ್ಧಿಯ ಕೆಲಸಗಳು ನಿಲ್ಲುತ್ತಿದ್ದರೆ ಅದು ಯಾರು ಹೊಣೆಯಾಗಬೇಕು ಎಂಬ ಪ್ರಶ್ನೆ ಮುನ್ನೆಚ್ಚರಿಕೆಯ ಘಂಟೆಯಂತೆ ಕೇಳಿ ಬರುತ್ತಿದೆ. ಪುರಸಭೆ ಎಂದರೆ ಕೇವಲ ರಾಜಕೀಯ ವೇದಿಕೆ ಅಲ್ಲ – ಅದು ಸ್ಥಳೀಯ ಅಭಿವೃದ್ಧಿಗೆ ದಿಕ್ಕು ನೀಡುವ ಪ್ರಮುಖ ವ್ಯವಸ್ಥೆ. ಹೀಗಾಗಿ, ಅಧಿಕಾರಿಗಳ ಮತ್ತು ಸದಸ್ಯರ ನಡುವೆ ಪುನಃ ಸಾಮರಸ್ಯದ ಕಾರ್ಯಪರಿಧಿಯನ್ನು ನಿರ್ಮಿಸಿ, ಸಾರ್ವಜನಿಕ ಸೇವೆಗೆ ಜೀವ ತುಂಬುವುದು ಈಗ ತುರ್ತು ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ, ಜಿಲ್ಲಾಡಳಿತ, ಪೌರಾಡಳಿತ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ತಕ್ಷಣ ಮಧ್ಯ ಪ್ರವೇಶಿಸಿ, ಗೊಂದಲದ ಪರಿಸ್ಥಿತಿಗೆ ಸ್ಪಷ್ಟತೆ, ಶಿಸ್ತು ಮತ್ತು ಸಮಾಧಾನ ತರುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂಬ ಅಂಕೋಲಾದ ಪ್ರಜ್ಞಾವಂತ ನಾಗರಿಕರ ಜನಾಭಿಪ್ರಾಯವಾಗಿದೆ.

Share This Article