ನಡುರಾತ್ರಿ ಮನೆಯವರು ನಿದ್ರಿಸುತ್ತಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳ… 24 ಗಂಟೆಯೊಳಗೆ ಪೊಲೀಸರ ಬಲೆಗೆ!!

News Desk
2 Min Read

ಕುಮಟಾ: ಪಟ್ಟಣದ ಬಸ್ತಿಪೇಟೆ ಬಳಿ ಮನೆಯೊಂದರಲ್ಲಿ ಜನರು ನಿದ್ರಿಸುತ್ತಿದ್ದ ವೇಳೆ ನುಗ್ಗಿ ಸಾವಿರಾರು ರೂಪಾಯಿ ನಗದು ದೋಚಿದ್ದ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದು, ಕಳ್ಳತನ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 15-02-2026 ರ ರಾತ್ರಿ ನಡೆದ ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರು ದಾಖಲಾದ ಕೇವಲ 10 ಗಂಟೆಗಳಲ್ಲಿ ಮತ್ತು ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಘಟನೆಯ ವಿವರ: ದಿನಾಂಕ 15 ರ ರಾತ್ರಿ 10:30 ರಿಂದ 16 ರ ಬೆಳಿಗ್ಗೆ 7:30 ರ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಮನೆಯವರೆಲ್ಲರೂ ಗಾಢ ನಿದ್ರೆಯಲ್ಲಿದ್ದ ವೇಳೆ, ಆರೋಪಿಯು ಕಿಟಕಿಯ ಮೂಲಕ ಕೈ ತೂರಿಸಿ, ಒಳಗಿನ ಚಿಲಕವನ್ನು ತೆಗೆದು ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಕಪಾಟಿನಲ್ಲಿದ್ದ 80,000 ರೂಪಾಯಿ ನಗದು ಹಣವನ್ನು ಕದ್ದು ಪರಾರಿಯಾಗಿದ್ದನು.

ಮನೆಯಲ್ಲಿ ಜನರಿದ್ದಾಗಿಯೇ ಕಳ್ಳತನ ನಡೆದಿದ್ದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ (ಗುನ್ನಾ ನಂ: 36/2026, ಕಲಂ: 331(4), 305 ಬಿ.ಎನ್.ಎಸ್.) ಪ್ರಕರಣ ದಾಖಲಾಗಿತ್ತು.

ಶಿವಮೊಗ್ಗ ಮೂಲದ ಆರೋಪಿ ಬಂಧನ: ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಕುಮಟಾ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಯೋಗೇಶ ಕೆ.ಎಂ. ಅವರ ನೇತೃತ್ವದಲ್ಲಿ, ಪಿಎಸ್ಐ ಮಯೂರ ಪಟ್ಟಣಶೆಟ್ಟಿ ಮತ್ತು ತಂಡ ಕಾರ್ಯಾಚರಣೆಗಿಳಿದಿತ್ತು. ತಾಂತ್ರಿಕ ಸಾಕ್ಷ್ಯ ಮತ್ತು ಖಚಿತ ಮಾಹಿತಿಯ ಜಾಡು ಹಿಡಿದ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಡಗೊಪ್ಪ ಗ್ರಾಮದ ಬಸವರಾಜ @ ಬಸ್ಯಾ (20) ಎಂಬಾತನನ್ನು ಬಂಧಿಸಿದ್ದಾರೆ.

ಈತ ಹೋಟೆಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತನಿಂದ ಕಳ್ಳತನ ಮಾಡಲಾದ ಪೂರ್ತಿ ಹಣ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ತಂಡಕ್ಕೆ ಶ್ಲಾಘನೆ: ಕಳ್ಳತನ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಪಿಐ ಯೋಗೇಶ ಕೆ.ಎಂ., ಪಿಎಸ್ಐ ಮಯೂರ ಪಟ್ಟಣಶೆಟ್ಟಿ, ಪಿಎಸ್ಐ ರವಿ ಗುಡ್ಡಿ, ಎಎಸ್ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಮತ್ತು ಪ್ರದೀಪ ನಾಯಕ ಅವರ ಕಾರ್ಯಕ್ಷಮತೆಯನ್ನು ಎಸ್ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್ಪಿ ಬಿ. ಗಿರೀಶ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಕುಮಟಾ ಪೊಲೀಸರ ಈ ತ್ವರಿತ ಕಾರ್ಯಾಚರಣೆಯಿಂದಾಗಿ ಕಳೆದುಹೋದ ಹಣ ಮರಳಿ ಸಿಕ್ಕಿದ್ದು ಮಾತ್ರವಲ್ಲದೆ, ನಾಗರಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿದೆ.

Share This Article