ಅಂಕೋಲಾ | ಡಿ.16: ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಸಚಿವರು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ 66ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಂಕೋಲ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಭಕ್ತಿಪೂರ್ವಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಂಕೋಲಾದ ಶ್ರೀ ಶಾಂತದುರ್ಗ ದೇವಸ್ಥಾನದಲ್ಲಿ ವಿಶೇಷ ಪೂಜೆ–ಅರ್ಚನೆ ಸಲ್ಲಿಸಿ, ಕುಮಾರಸ್ವಾಮಿಯವರಿಗೆ ಆಯುಷ್ಯ, ಆರೋಗ್ಯ ಮತ್ತು ಸುಖಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ನಂತರ ಅಂಕೋಲಾದ ಕ್ರಿಸ್ತಮಿತ ಆಶ್ರಮದಲ್ಲಿ ಹುಟ್ಟುಹಬ್ಬದ ನಿಮಿತ್ತ ಕೇಕ್ ಕತ್ತರಿಸಲಾಯಿತು. ಈ ವೇಳೆ ಮಾತನಾಡಿದ ಅಂಕೋಲಾ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಂದೀಪ್ ಜಿ. ಬಂಟ್, ಕುಮಾರಸ್ವಾಮಿಯವರಿಗೆ ದೇವರು ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಶಾಂತಿಯನ್ನು ಕರುಣಿಸಲಿ. ಮುಂದಿನ ದಿನಗಳಲ್ಲಿ ಅವರು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂಬ ಆಶಯದೊಂದಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಈ ಶುಭದಿನದಲ್ಲಿ ಆಶ್ರಮದ ಹಿರಿಯರಿಂದ ಅವರಿಗೆ ಆಶೀರ್ವಾದ ದೊರೆತಿರುವುದು ಸಂತಸ ತಂದಿದೆ ಎಂದರು.

ಹುಟ್ಟುಹಬ್ಬದ ಆಚರಣೆಯ ಭಾಗವಾಗಿ ಕ್ರಿಸ್ತಮಿತ ಆಶ್ರಮದ ನಿವಾಸಿಗಳಿಗೆ ಊಟವನ್ನು ವಿತರಿಸಿ ಮಾನವೀಯತೆ ಹಾಗೂ ಸಮಾಜಪರ ಕಾಳಜಿಯನ್ನು ವ್ಯಕ್ತಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಂಕೋಲಾ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಂದೀಪ್ ಜಿ. ಬಂಟ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಮೋಹಿನಿ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡು ನಾಯ್ಕ್, ನಗರ ಘಟಕ ಅಧ್ಯಕ್ಷ ಸುರೇಶ ಎಚ್. ನಾಯ್ಕ್, ಹಿರಿಯ ಮುಖಂಡರಾದ ಗಣಪತಿ ಬಿ. ನಾಯ್ಕ್ ಹಾಗೂ ಮಹೇಶ ಗೌಡ, ಕೃಷ್ಣಾಪುರ ಜೆಡಿಎಸ್ ಕಾರ್ಯದರ್ಶಿ ಸುರೇಶ ಆರ್. ನಾಯ್ಕ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ: ಕಿರಣ ಗಾಂವಕರ

