
ಅಂಕೋಲಾ: ಅಂಕೋಲಾ ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೋನಿಯ ನಿವಾಸಿಗಳು ಹೆಸ್ಕಾಂ (HESCOM) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕಾಲೋನಿಯ ನಿವಾಸಿಗಳು ಸೋಮವಾರ ಹೆಸ್ಕಾಂ ಕಚೇರಿಗೆ ತೆರಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. “ನಮ್ಮ ಜನತಾ ಕಾಲೋನಿ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಅನಿಶ್ಚಿತ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಕೆಲವೊಮ್ಮೆ ಯಾವುದೇ ಮುನ್ಸೂಚನೆ ಇಲ್ಲದೆ ಗಂಟೆಗಟ್ಟಲೆ ವಿದ್ಯುತ್ ಇರುವುದಿಲ್ಲ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರು , ಫೋನ್ ಕರೆಗಳ ಮೂಲಕ ತಿಳಿಸಿದರು ಸಮಸ್ಯೆಗೆ ಯಾವುದೇ ಪರಿಹಾರ ಆಗಿರುವುದಿಲ್ಲ. ಅನಿಮಿತ ವಿದ್ಯುತ್ ಪೂರೈಕೆಯಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ, ಗೃಹೋಪಯೋಗಿ ಕಾರ್ಯಗಳಿಗೆ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ, ಕಾಲೋನಿ ನಿವಾಸಿಗಳು, ” ವಿದ್ಯುತ್ ಇಲಾಖೆಯವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಒದಗಿಸಬೇಕು” ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು, ಜನತಾ ಕಾಲೋನಿಯಲ್ಲಿನ ವಿದ್ಯುತ್ ವ್ಯತ್ಯಯದ ಕುರಿತು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಹರಿಹರ ಹರಿಕಾಂತ, ಶ್ರೀನಿವಾಸ್ ಗಾವ್ಕರ್, ನಾಗರಾಜ್ ನಾಯ್ಕ, ವಿನಾಯಕ್ ಹಾಗೂ ಜನತಾ ಕಾಲಿನಿ ನಿವಾಸಿಗಳು,ಪ್ರಮುಖರು ಹಾಜರಿದ್ದರು..

